ಅಫ್ಜಲ್ ಗುರುನನ್ನು ಶೀಘ್ರ ಗೆಲ್ಲಿಗೇರಿಸಿ
ಮುಂಬೈ, ನ. 3 : ದೇಶದ ಹೃದಯ ಭಾಗ ಸಂಸತ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಯೋತ್ಪಾದಕ ಅಫ್ಜಲ್ ಗುರುಗೆ ಸುಪ್ರಿಂಕೋರ್ಟ್ ಮರಣದಂಡನೆ ಶಿಕ್ಷೆಯನ್ನು ವಿಧಿಸಿದೆ. ಆದರೆ ಕಾರ್ಯಗತಗೊಳಿಸಲು ಯುಪಿಎ ಹಿಂದೇಟು ಹಾಕುತ್ತಿರುವುದಕ್ಕೆ ಸ್ಪಷ್ಟವಾದ ಕಾರಣ ನೀಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಗಲ್ಲು ಶಿಕ್ಷೆಯಿಂದ ವಿನಾಯಿತಿ ನೀಡಿ ಎಂದು ಅಪರಾಧಿ ಅಫ್ಜಲ್ ಗುರು 2006, ಅ. 4 ರಂದು ರಾಷ್ಟ್ರಪತಿಯವರಿಗೆ ಮನವಿ ಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿಯವರು ನಿರ್ಧಾರ ಪ್ರಕಟವಾದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹೇಳುತ್ತಿರುವುದರ ಹಿಂದಿನ ಮರ್ಮವಾದರೂ ಏನು ಎಂದು ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆ ತೆಗೆದುಕೊಂಡರು. ದೇಶದ ಅತ್ಯುನ್ನತ ನ್ಯಾಯಾಲಯ ಸುಪ್ರಿಂಕೋರ್ಟ್ ಅಪರಾಧಿಗೆ ಗಲ್ಲು ಶಿಕ್ಷೆ ನೀಡಿ ಎಂದು ಆದೇಶ ಹೊರಡಿಸಿದ್ದರೂ ಕಾಂಗ್ರೆಸ್ ನೇತೃತ್ವದ ಸರ್ಕಾರ ಒಂದು ವರ್ಗದ ಮತಗಳ ಓಲೈಕೆಗಾಗಿ ಉಗ್ರನನ್ನು ಕಾನೂನಿನ ಬಂಧನದಿಂದ ಬಿಡುಗಡೆಗೊಳಿಸಲು ಯತ್ನಿಸುತ್ತಿರುವುದು ಖಂಡನಾರ್ಹ ಎಂದು ರಾಜನಾಥ್ ಸಿಂಗ್ ತೀವ್ರ ಆಕ್ರೋಷ ವ್ಯಕ್ತಪಡಿಸಿದರು.
ಕೇಂದ್ರದ ತಿರುಗೇಟು
ಮಾಲೇಗಾಂವ್ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ಬಂಧನದಿಂದ ಬಿಜೆಪಿಗೆ ತೀವ್ರ ಮುಜುಗರ ಅನುಭವಿಸುವಂತಾಗಿದೆ ಎಂದು ಲೇವಡಿ ಮಾಡಿದೆ. ಸ್ಫೋಟದಂತಹ ಕೃತ್ಯಗಳಲ್ಲಿ ಸಂಘ ಪರಿವಾರದ ಕಾರ್ಯಕರ್ತರ ಕೈವಾಡ ಇರುವುದನ್ನು ಬಿಜೆಪಿ ಅರಗಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತಮ್ಮ ತಪ್ಪನ್ನು ಮರೆಮಾಚಲು ಇನ್ನೊಂದು ಪ್ರಕರಣವನ್ನು ಕೆದಕುತ್ತಿದ್ದಾರೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯಸಿಂಗ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications