ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು
ಬೆಂಗಳೂರು, ನ. 3 : ನಿರೀಕ್ಷೆಯಂತೆ ಸ್ಥಳೀಯ ಸಂಸ್ಥೆಯ ವಿಧಾನ ಪರಿಷತ್ ಚುನಾವಣೆಯ ಮೂರು ಕ್ಷೇತ್ರಗಳಲ್ಲಿ ಆಡಳಿತರೂಢ ಭಾರತೀಯ ಜನತಾ ಪಕ್ಷ ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದಾರೆ. ಈ ಮೂಲಕ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಭಾರಿ ಹಿನ್ನೆಡೆಯಿಂಟಾಗಿದ್ದು, ಮುಖಭಂಗದ ಅನುಭವಿಸುವಂತಾಗಿದೆ.
ಕಳೆದ ತಿಂಗಳು ಅ. 31 ರಂದು ಬೆಳಗಾವಿ, ಧಾರವಾಡ ಹಾಗೂ ಕೊಡಗು ಕ್ಷೇತ್ರಗಳಲ್ಲಿ ವಿಧಾನ ಪರಿಷತ್ ಚುನಾವಣೆ ನಡೆದಿತ್ತು. ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಶಶಿಕಾಂತ ಅಕ್ಕಪ್ಪ ನಾಯಿಕ ಅವರು ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಾಜಿ ಸಚಿವ ಎಂ.ಸಿ.ಮಾಳಗಿ ಅವರನ್ನು 1418 ಮತಗಳ ಬೃಹತ್ ಅಂತರದಿಂದ ಮಣಿಸಿದರು. ಶಶಿಕಾಂತ ನಾಯಿಕ ಒಟ್ಟು 4958 ಮತಗಳನ್ನು ಪಡೆದರೆ, ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಾಳಗಿ 3540 ಗಳಿಸಿ ಪರಾಭವ ಹೊಂದಿದರು.
ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಶಿವರಾಜ್ ಸಜ್ಜನ ಅವರು ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರನ್ನು 700ಕ್ಕೊ ಅಧಿಕ ಮತಗಳ ಅಂತರದಿಂದ ಸೋಲಿಸಿ, ಗೆಲುವು ಸಾಧಿಸಿದರು. ಬಿಜೆಪಿಯ ಶಿವರಾಜ್ ಸಜ್ಜನ ಒಟ್ಟು 3720 ಮತಗಳನ್ನು ಗಳಿಸಿದರೆ, 3127 ಮತಗಳನ್ನು ಪಡೆಯಲಷ್ಟೆ ಶಕ್ತರಾದ ಶ್ರೀನಿವಾಸ ಮಾನೆ ಸೋಲನುಭಿಸಿದರು.
ಕೊಡುಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಜಿ.ಮೇದಪ್ಪ ಒಟ್ಟು 751 ಮತಗಳು ಲಭಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಚೆಂಗಪ್ಪ 578 ಮತಗಳನ್ನು ಪಡೆದುಕೊಳ್ಳುವ ಮೂಲಕ 173 ಮತಗಳ ಅಂತರದಿಂದ ಪರಾಭವಹೊಂದಿದರು. ನಗರದಾದ್ಯಂತ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಅಚರಿಸುತ್ತಿದ್ದಾರೆ. ಬಿಜೆಪಿ ಮುಖ್ಯಮಂತ್ರಿ ಯಡಿಯೂರಪ್ಪ ಪರ ಘೋಷಣೆಗಳು ಸಾಮಾನ್ಯವಾಗಿದ್ದವು.
ನಿರೀಕ್ಷಿತ ಫಲಿತಾಂಶ : ಕುಮಾರಸ್ವಾಮಿ
ಆಡಳಿತರೂಢ ಬಿಜೆಪಿ ಸರ್ಕಾರ ಸುರಿದ ಭಾರಿ ಹಣ ಜೊತೆಗೆ ಅಧಿಕಾರ ದುರುಪಯೋಗ ಮಾಡಿಕೊಳ್ಳುವುದರ ಮೂಲಕ ಗೆಲುವು ಸಾಧಿಸಿದೆ. ಇದು ನಿರೀಕ್ಷಿತ ಫಲಿತಾಂಶವಾಗಿದೆ. ಈ ಚುನಾವಣೆಗೂ ಮುಂಬರುವ ಉಪಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಜೆಡಿಎಸ್ ಎಲ್ಲ ಎಂಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎನ್ನುವುದು ಅತಿಶಯೋಕ್ತಿಯಾಗಲಿದೆ. ಆದರೆ ಒಂದಂತೂ ಸ್ಪಷ್ಟ ಹೆಚ್ಚು ಸ್ಥಾನ ಗಳಿಸುವುದು ಜೆಡಿಎಸ್ ಎಂದು ಮಾಡಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಪಕ್ಷದ ನಿಯೋಜಿತ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸೋಲಿನಿಂದ ವಿಚಲಿತರಾಗಿಲ್ಲ : ದೇಶಪಾಂಡೆ
ಸೋಲಿನಿಂದ ವಿಚಲಿತರಾಗುವ ಪ್ರಶ್ನೆಯೇ ಇಲ್ಲ. ಮುಂಬರುವ ಉಪಚುನಾವಣೆ ಹಾಗೂ ಲೋಕಸಭೆ ಚುನಾವಣೆಗೆ ಪಕ್ಷವನ್ನು ಇನ್ನಷ್ಟು ಬಲಪಡಿಸುವುದಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ಅಧಿಕಾರ ದುರುಪಯೋಗಪಡಿಸಿಕೊಂಡಿರುವುದು ಸತ್ಯ. ಇದು ಹಣದ ಬಲದ ಗೆಲುವು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications