ಕನ್ನಡ ಭಾಷೆಯ ಅಭಿವೃದ್ಧಿಗೆ ಕಂಕಣ ಬದ್ಧ
ಬೆಂಗಳೂರು, ನ.2: ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ದೊರಕಿರುವ ಶುಭ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಹಲವು ವಿಶೇಷ ಯೋಜನೆಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಈ ಕೆಳಗಿನ ಯೋಜನೆಗಳನ್ನು ಘೋಷಿಸಿದ್ದಾರೆ.
1. ನಮ್ಮ ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳ ಕನ್ನಡ ವಿಭಾಗಕ್ಕೆ ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ತಲಾ 2 ಕೋಟಿ ರು.ಗಳ ವಿಶೇಷ ಅನುದಾನ ನೀಡಲಾಗುವುದು. (ವೆಚ್ಚ 18 ಕೋಟಿ)
2. ಹೊರ ರಾಜ್ಯ ಮತ್ತು ಹೊರ ದೇಶಗಳ ವಿಶ್ವವಿದ್ಯಾಲಯಗಳು ಕನ್ನಡ ಅಧ್ಯಯನ ಪೀಠ ಸ್ಥಾಪನೆ ಮಾಡಲು ಮುಂದೆ ಬಂದಲ್ಲಿ ರಾಜ್ಯ ಸರ್ಕಾರ ಇದಕ್ಕೆ 1 ಕೋಟಿ ರು. ದತ್ತಿ ನಿಧಿ ಸ್ಥಾಪಿಸುವುದು. (ವೆಚ್ಚ 5 ಕೋಟಿ)
3. ಕನ್ನಡ ತಂತ್ರಾಂಶ ಅಭಿವೃದ್ಧಿಗೆ ತಜ್ಞರ ಒಂದು ಸಮಿತಿ ನೇಮಕ ಮಾಡಿ ಇದಕ್ಕಾಗಿ ಈಗ ಇಡಲಾಗಿರುವ ಅನುದಾನವನ್ನು 2 ಕೋಟಿ ರು.ಗಳಿಗೆ ಹೆಚ್ಚಿಸಲಾಗುವುದು. (ವೆಚ್ಚ 1 ಕೋಟಿ)
4. ಕನ್ನಡ ಮಾಧ್ಯಮದಲ್ಲಿ ಐ.ಎ.ಎಸ್, ಐ.ಪಿ.ಎಸ್, ಮತ್ತು ಐ.ಎಫ್.ಎಸ್.ಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 1 ಲಕ್ಷ ರು ಮತ್ತು ಇತರೆ ಕೇಂದ್ರ ನಾಗರೀಕ ಸೇವೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 50 ಸಾವಿರ ರು. ಬಹುಮಾನ ನೀಡಲಾಗುವುದು. (ವೆಚ್ಚ 10 ಲಕ್ಷ)
5. ರಾಜ್ಯದ ಎಲ್ಲ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಕನ್ನಡ ಕಲಿಕೆಗೆ ವಿಶೇಷ ಒತ್ತು ನೀಡಲು ಗುತ್ತಿಗೆ ಆಧಾರದ ಮೇಲೆ ಉಪನ್ಯಾಸಕರನ್ನು ನೇಮಕಾತಿ ಮಾಡಲು ಪ್ರೋತ್ಸಾಹ ನೀಡಲಾಗುವುದು ಮತ್ತು 1ನೇ ವರ್ಷದ ಕೊನೆಯಲ್ಲಿ ಕನ್ನಡ ಪರೀಕ್ಷೆ ನಡೆಸಿ ವಿಶ್ವವಿದ್ಯಾನಿಲಯದಿಂದ ಸರ್ಟಿಫಿಕೇಟ್ ನೀಡುವ ವ್ಯವಸ್ಥೆ ಮಾಡಲಾಗುವುದು. (ವೆಚ್ಚ 90 ಲಕ್ಷ)
ಕೇಂದ್ರ ಸರ್ಕಾರ ನೀಡಲಿರುವ ವಿಶೇಷ ಅನುದಾನದ ಜೊತೆಗೆ ಕನ್ನಡ ಭಾಷೆಯ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ಹೆಚ್ಚುವರಿ ಅನುದಾನ ನೀಡುವುದರಿಂದ ನಮ್ಮ ನಾಡು ನುಡಿ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಹೆಚ್ಚಿನ ಮನ್ನಣೆ ಮತ್ತು ಖ್ಯಾತಿಯನ್ನು ಪಡೆಯಲು ಸಾಧ್ಯವಾಗುವುದು ಎಂದು ತಾವು ನಂಬಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಕನ್ನಡ ಭಾಷೆಯ ಅಭಿವೃದ್ಧಿಗೆ ಕಂಕಣ ಬದ್ಧವಾಗಿದ್ದು ಈ ದಿಶೆಯಲ್ಲಿ ನಮ್ಮ ನಾಡಿನ ಸಾಹಿತಿಗಳು, ಕನ್ನಡ ಪ್ರೇಮಿಗಳು, ಕನ್ನಡ ಹೋರಾಟಗಾರರು ವಿಶೇಷ ಸಲಹೆ ಸೂಚನೆಗಳನ್ನು ನೀಡಬೇಕೆಂದು ಕೋರಿರುವ ಮುಖ್ಯಮಂತ್ರಿಗಳು ಅವರ ಸಲಹೆ ಸೂಚನೆಗಳನ್ನು ಅನುಸರಿಸಿ ಸರ್ಕಾರ ಮುಂಬರಲಿರುವ ದಿನಗಳಲ್ಲಿ ಆದ್ಯತೆ ನೀಡಿ ವಿಶೇಷ ಯೋಜನೆ ರೂಪಿಸಲು ಸಿದ್ಧವಿದೆ ಎಂದು ಪ್ರಕಟಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ರಾಜ್ಯೋತ್ಸವ ಕೊಡುಗೆ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ
ಹೈಕ ಸಮಸ್ಯೆ; ಶೀಘ್ರ ಯಡಿಯೂರಪ್ಪ ದೆಹಲಿಗೆ












Click it and Unblock the Notifications