ಕಾಂಗ್ರೆಸ್ಸಿಗೆ ಜೆಡಿಎಸ್ಸಿನ ಹಂಗು ಬೇಕಿಲ್ಲ ;ಸಿದ್ದು
ಬೆಂಗಳೂರು, ಅ. 22 : ಉಪಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಮುಂದಾಗಿರುವುದಕ್ಕೆ ನನ್ನ ಬಲವಾದ ವಿರೋಧವಿದೆ ಎಂದು ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಮೈತ್ರಿಗೆ ಕುರಿತು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮತ್ತು ಸಿದ್ದು ಬಣದಲ್ಲಿ ಬಿರುಕು ಹೆಚ್ಚಾಗುವ ಲಕ್ಷಣಗಳು ದಟ್ಟವಾಗಿವೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕಾಂಗ್ರೆಸ್ ಪಕ್ಷಕ್ಕೆ ಸ್ವಂತ ಬಲದಿಂದ ಚುನಾವಣೆ ಎದುರಿಸುವ ಸಾಮರ್ಥ್ಯ ಇದೆ ಎಂದಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ತ್ಯಜಿಸುತ್ತಾರೆ ಎಂದು ಹರಡಿರುವ ಸುದ್ದಿ ಶುದ್ಧ ಸುಳ್ಳು. ನಾನು ಕಾಂಗ್ರೆಸ್ ಪಕ್ಷದಲ್ಲಿ ಸಂತೋಷದಿಂದ ಇದ್ದೇನೆ, ಬಿಜೆಪಿ ಸೇರ್ಪಡೆ ಕೇವಲ ವದಂತಿ ಎಂದು ಹೇಳುವ ಮೂಲಕ ಈವರೆಗೂ ಎದ್ದಿರುವ ಎಲ್ಲ ಗಾಳಿ ಸುದ್ದಿಗೆ ಸಿದ್ಧರಾಮಯ್ಯ ತೆರೆ ಎಳೆದರು.
ಅ. 31 ರಂದು ನಡೆಯಲಿರುವ ಧಾರವಾಡ, ಬೆಳಗಾವಿ ಹಾಗೂ ಮಡಿಕೇರಿ ವಿಧಾನಪರಿಷತ್ ಚುನಾವಣೆ ಸಲುವಾಗಿ ಜೆಡಿಎಸ್ ಜೊತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಸ್ವಂತ ಬಲದ ಮೇಲೆ ಚುನಾವಣೆ ಎದುರಿಸುವ ಸಾಮರ್ಥ್ಯವಿದೆ. ಅನ್ಯ ಪಕ್ಷಗಳೊಂದಿಗೆ ಚುನಾವಣೆ ಹೊಂದಾಣಿಕೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಪರೋಕ್ಷವಾಗಿ
ಮುಂಬರುವ ಉಪಚುನಾವಣೆಯಲ್ಲಿಯೂ ಕೂಡಾ ಕಾಂಗ್ರೆಸ್ ಪಕ್ಷ ಏಕಾಂಗಿ ಹೋರಾಟಕ್ಕೆ ಸಜ್ಜಾಗಬೇಕಿದೆ ಎಂದು ಸಿದ್ದರಾಮಯ್ಯ ಕಾಂಗ್ರೆಸ್ ವರಿಷ್ಠರಿಗೆ ತಮ್ಮ ನಿಲುವನ್ನು ರವಾನಿಸಿದ್ದಾರೆ. ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಜಾತ್ಯಾತೀತ ಪಕ್ಷಗಳು ವೈಯಕ್ತಿಕ ಪ್ರತಿಷ್ಠೆಯನ್ನು ಬದಿಗಿಟ್ಟು ಚುನಾವಣೆಯನ್ನು ಎದುರಿಸುವ ಅನಿವಾರ್ಯತೆ ಉಂಟಾಗಿದೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿ ಮಾಡಿಕೊಂಡಿರುವುದನ್ನು ಇಲ್ಲಿ ನೆನೆಯಬಹುದು.
ರಾಜ್ಯದಲ್ಲಿ ಆಡಳಿತದಲ್ಲಿರುವ ಯಡಿಯೂರಪ್ಪ ನೇತೃತ್ವದ ಸರ್ಕಾರ ಕೆಟ್ಟ ಆಡಳಿತ ನಡೆಸತೊಡಗಿದೆ. ಬಿಜೆಪಿ ಅಧಿಕಾರಿ ಬಂದ ನಂತರ ಹೇಳಿಕೊಳ್ಳುವಂಥ ಯಾವ ಕೆಲಸ ಸರಿಯಾಗಿ ಮಾಡಿಲ್ಲ. ಇದೊಂದೆ ಸಾಕು ಅವರನ್ನು ಉಪಚುನಾವಣೆಯಲ್ಲಿ ಸೋಲಿಸಲು ಎಂದು ಸರ್ಕಾರವನ್ನು ತೀಕ್ಣವಾಗಿ ಟೀಕಿಸಿದರು.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:
ಉಪಚುನಾವಣೆ ಮೈತ್ರಿಗೆ ತೀರ್ಮಾನಿಸಿಲ್ಲ ದೇಶಪಾಂಡೆ
ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ: ಕುಮಾರಸ್ವಾಮಿ
ಕಾಂಗ್ರೆಸ್ ಜೆಡಿಎಸ್ ಮೈತ್ರಿಗೆ ಸಿಎಂ ಕಿಡಿ
ಅಹಿಂದ ಹಾದಿಯಲ್ಲಿ ಸಾಗಲು ಸಿದ್ದರಾಮಯ್ಯ ಒಲವು












Click it and Unblock the Notifications