ಸಂಜೆ ಹೊತ್ತು ವಿದ್ಯುತ್ ಕಡಿತ ಇಲ್ಲ: ಈಶ್ವರಪ್ಪ
ಹಾಸನ, ಅ. 22: ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಸಿರಿಕೊಂಡು ಸಂಜೆ 6 ರಿಂದ ರಾತ್ರಿ 10ರ ವರೆಗೆ ವಿದ್ಯುತ್ ಕಡಿತಗೊಳಿಸದಿರಲು ತೀರ್ಮಾನಿಸಲಾಗಿದೆ ಎಂದು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಸರ್ಕಾರ ಜಾರಿಗೆ ತಂದಿರುವ ಲೋಡ್ ಶೆಡ್ಡಿಂಗ್ ನ್ನು ಪುನರ್ ಪರೀಶೀಲನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಹಾಸನದ ಹಾಸನಾಂಬ ದೇವಸ್ಥಾನಕ್ಕೆ ಬುಧವಾರ ಖಾಸಗಿ ಭೇಟಿ ನೀಡಿ ದೇವರ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆಯಾಗಬಾರದೆಂದು ಈ ಕ್ರಮ ಕೈಗೊಳ್ಳಲಾಗಿದೆ ಎಂದರು. ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಉಳಿತಾಯ ಮಾಡಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಬೇರೆ ಬೇರೆ ಮೂಲಗಳಿಂದ ವಿದ್ಯುತ್ ಖರೀದಿಸಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು.
ಮುಖ್ಯವಾಗಿ ಪ್ರಮುಖ ಕೈಗಾರಿಕೆಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದ ಅವರು, ಸಾಧ್ಯವಾದ ಮಟ್ಟಿಗೆ ವಿದ್ಯುತ್ ಉಳಿತಾಯ ಮಾಡುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.
ಕಳೆದ ಅನೇಕ ದಿನಗಳಿಂದ ಸರ್ಕಾರಕ್ಕೆ ಬರಬೇಕಿರುವ 280 ಕೋಟಿ ರುಪಾಯಿ ವಿದ್ಯುತ್ ಬಾಕಿ ಬಿಲ್ ವಸೂಲಿಗಾಗಿ ನೂತನ ಯೋಜನೆಯೊಂದನ್ನು ರೂಪಿಸಲಾಗುವುದು. ಈ ಮೂಲಕ ಹಂತಹಂತವಾಗಿ ವಿದ್ಯುತ್ ಬಾಕಿ ಬಿಲ್ ವಸೂಲಿ ಮಾಡಲಾಗುವುದು ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ತಾತ್ಕಾಲಿಕ ಲೋಡ್ ಶೆಡ್ಡಿಂಗ್ ಶುರು : ಈಶ್ವರಪ್ಪ












Click it and Unblock the Notifications