ಚಂದ್ರಯಾನ ಯೋಜನೆಯಲ್ಲಿ ಕನ್ನಡಿಗರ ಪಾತ್ರ
ಬೆಂಗಳೂರು, ಅ. 22 : ಅಂತರಿಕ್ಷ ಅಧ್ಯಯನದಲ್ಲಿ ದೇಶದ ಮಹತ್ವದ ಯೋಜನೆಯಾದ ಚಂದ್ರಯಾನ-1 ಯೋಜನೆಯ ರೂವಾರಿಗಳಲ್ಲಿ ಹಲವು ಕನ್ನಡಿಗರಿದ್ದಾರೆ ಎಂಬುದು ಇಡೀ ರಾಜ್ಯಕ್ಕೆ ಸಂದಿರುವ ಹೆಮ್ಮೆಯ ವಿಷಯವಾಗಿದೆ.
ಶ್ರೀರಂಗಪಟ್ಟಣದ ಎಸ್.ಕೆ.ಶಿವಕುಮಾರ್ ಅವರೇ ಅಚ್ಚಕನ್ನಡಿಗ ಇಸ್ರೋ ವಿಜ್ಞಾನಿ. ಬೆಂಗಳೂರಿನಲ್ಲಿ ಚಂದ್ರಯಾನಕ್ಕಾಗಿ ರೂಪಿಸಿದ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಅಂಡ್ ಕಮಾಂಡ್ ನೆಟ್ ವರ್ಕ್ ನಿರ್ದೇಶಕರಾಗಿ ಶಿವಕುಮಾರ್ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಯೋಜನೆಯಲ್ಲಿ ಅತಿ ಮುಖ್ಯ ಮೂವರು ವಿಜ್ಞಾನಿಗಳಿದ್ದು, ಅಷ್ಟು ಜನ ದಕ್ಷಿಣ ಭಾರತೀಯರು. ಶಿವಕುಮಾರ್ ಜತೆಯಲ್ಲಿ ಯೋಜನಾ ನಿರ್ದೇಶಕ ಮೈಲಿಸ್ವಾಮಿ ಅಣ್ಣಾದೊರೈ ಮತ್ತು ಉಡಾವಣಾ ವಾಹಕದ ನಿರ್ದೇಶಕ ಜಾರ್ಜ್ ಕೋಶೆ ಉಳಿದಿಬ್ಬರು ವಿಜ್ಞಾನಿಗಳಾಗಿದ್ದಾರೆ.
ಶಿವಕುಮಾರ್ ಅವರ ಕೆಲಸ ಮುಂದಿನ ಎರಡು ವರ್ಷಗಳ ಕಾಲ ಮಹತ್ವದ್ದಾಗಿದೆ. ಶ್ರೀಹರಿಕೋಟಾದಿಂದ ಉಡಾವಣೆಯಾದ 18 ನಿಮಿಷದಿಂದ ಮುಂದಿನ ಎರಡು ವರ್ಷಗಳ ಕಾಲ ಇದರ ಸಂಪೂರ್ಣ ನಿಯಂತ್ರಣ ಇವರದಾಗಿರುತ್ತದೆ. ಚಂದ್ರನಿಂದ 100 ಕಿಮೀ ದೂರದ ಲೂನಾರ್ ಕಕ್ಷೆಯಲ್ಲಿ ಪ್ರತಿಷ್ಠಾಪನೆ ಮಾಡುವುದರಿಂದ ಹಿಡಿದು ಅದು ಕಳುಹಿಸುವ ಮಾಹಿತಿ ಸ್ವೀಕರಿಸಿ, ವಿಶ್ಲೇಷಣೆ ಮಾಡಿ ಹಾಗೂ ನಿಯಂತ್ರಣ ಮಾಡುವ ಪ್ರತಿಯೊಂದು ಕಾರ್ಯವನ್ನೂ ಅವರು ಮಾಡಲಿದ್ದಾರೆ. ಶಿವಕುಮಾರ್ 1998 ರಿಂದ ಇಸ್ರೋದಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.
ಇಲ್ಲಿ ಇನ್ನೂ ಹಲವು ಕನ್ನಡಿಗರಿದ್ದಾರೆ. ಅವರಲ್ಲಿ ಕಾರ್ಕಳದ ಶ್ರಿನಿವಾಸ್ ಹೆಗಡೆ ಪ್ರಮುಖರು. ಇವರು ಪೀಣ್ಯ ಸ್ಯಾಟಲೈಟ್ ಕಂಟ್ರೋಲ್ ಸೆಂಟರ್ ನ ನಿರ್ದೇಶಕರು. ಇದಲ್ಲದೇ ಯಾವ ಪಥದಲ್ಲಿ ಸಾಗಿ ಚಂದ್ರನನ್ನು ಸೇರಬೇಕೆಂದು ದಾರಿ ನಿರ್ಮಾಣ ಮಾಡಿದವರು ಎನ್.ಎಸ್.ಗೋಪಿನಾಥ್ ಮತ್ತು ಅನಂತಕೃಷ್ಣ ಇವರಿಬ್ಬರು ಕನ್ನಡಿಗರಾಗಿದ್ದಾರೆ. ಇದಲ್ಲದೇ ಬಾಹ್ಯಾಕಾಶ ನೌಕೆ ಮಾಡುವ ಪ್ರಮುಖ ಕಾರ್ಯ ತನ್ನಲ್ಲಿರುವ ಕ್ಯಾಮರಾಗಳಿಂದ ಚಂದ್ರನ ಮೇಲಿನ ಸಮೀಕ್ಷೆ ನಡೆಸುವುದು. ಇಂತಹ ಕ್ಯಾಮರಾ ನಿರ್ಮಿಸಿಕೊಟ್ಟ ಡಾ. ರಂಗನಾಥ್ ನವಲಗುಂದ್ ಸಹ ಕನ್ನಡಿಗರು. ಸಾವಿರಾರು ಜನ ಈ ಯೋಜನೆಗೆ ದುಡಿದಿದ್ದಾರೆ. ಇದರಲ್ಲಿ ನೂರಾರು ಜನ ಕನ್ನಡಿಗರು ಇದ್ದಾರೆ. ಈ ಐದು ಮಂದಿ ಯೋಜನೆಯ ಪ್ರಮುಖರಾಗಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಚಂದ್ರನ ಊರಿನ ಹಾದಿಯಲ್ಲಿ ಉಪಗ್ರಹ












Click it and Unblock the Notifications