ಎಂಎನ್ಎಸ್ ಕ್ರಮ ಖಂಡಿಸಿ ಬಿಹಾರದಲ್ಲಿ ರೈಲಿಗೆ ಬೆಂಕಿ
ಪಾಟ್ನಾ, ಅ. 22 : ರೈಲ್ವೆ ಇಲಾಖೆಯ ಪರೀಕ್ಷೆಗೆ ತೆರಳಿದ್ದ ಉತ್ತರ ಭಾರತ ಪರೀಕ್ಷಾರ್ಥಿಗಳ ಮೇಲೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಾರ್ಯಕರ್ತರು ನಡೆಸಿದ ದಾಳಿಯನ್ನು ಖಂಡಿಸಿ ಬಿಹಾರ ವಿದ್ಯಾರ್ಥಿಗಳು ಭಾಗಲ್ಪುರ್-ದೆಹಲಿ ವಿಕ್ರಮಶೀಲ ಎಕ್ಸ್ ಪ್ರೆಸ್ ರೈಲನ್ನು ತಡೆದು ಐದು ಬೋಗಿಗಳಿಗೆ ಬೆಂಕಿ ಹಚ್ಚಿರುವ ಘಟನೆ ಬಾರ್ಹಾ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಜರುಗಿದೆ.
ಕಳೆದ ಭಾನುವಾರ ಮುಂಬೈಯಲ್ಲಿ ನಡೆಯಬೇಕಿದ್ದ ರೈಲ್ವೆ ನೇಮಕಾತಿ ಪರೀಕ್ಷೆಯಲ್ಲಿ ಸ್ಥಳೀಯರಿಗೆ ಅಧ್ಯತೆ ನೀಡುತ್ತಿಲ್ಲ. ಇದರಿಂದ ಮರಾಠಿಗರಿಗೆ ನೇಮಕಾತಿಯಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಎಂಎನ್ಎಸ್ ಕಾರ್ಯಕರ್ತರು ಪರೀಕ್ಷಾ ಕೇಂದ್ರ ಮೇಲೆ ದಾಳಿ ನಡೆಸಿದ್ದರು. ಪರೀಕ್ಷೆಗೆ ತೆರಳಿದ್ದ ಉತ್ತರ ಭಾರತದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿತ್ತು. ಎಂಎನ್ಎಸ್ ಸಂಘಟನೆಯ ಕ್ರಮವನ್ನು ಖಂಡಿಸಿದ ಬಿಹಾರಿ ವಿದ್ಯಾರ್ಥಿಗಳು ಇಂದು ವಿಕ್ರಮಶೀಲ ಎಕ್ರ್ ಪ್ರೆಸ್ ರೈಲನ್ನು ತಡೆದು ಅದರಲ್ಲಿದ್ದ ಪ್ರಯಾಣಿಕರನ್ನು ಹೊರಕಳಿಸಿ ಐದು ಬೋಗಿಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ನ್ಯಾಯಾಂಗ ಬಂಧನದಲ್ಲಿರುವ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ವಿರುದ್ಧ ಉಗ್ರ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಉತ್ತರ ಭಾರತ ವಿದ್ಯಾರ್ಥಿಗಳ ಮೇಲೆ ಹಲ್ಲೆ ಖಂಡಿಸಿ ಬಿಹಾರಿ ವಿದ್ಯಾರ್ಥಿಗಳ ತಂಡ ನಡೆಸಿದ ಪ್ರತಿಭಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಪರಿಸ್ಥಿತಿಯನ್ನು ತಿಳಿಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)
ರಾಜ್ ಠಾಕ್ರೆ ಬಂಧನ, ಮಹಾರಾಷ್ಟ್ರ ಉದ್ವಿಗ್ನ












Click it and Unblock the Notifications