ಆನೇಕಲ್ ಚರ್ಚ್ ಗೆ ಬೆಂಕಿ ಆಕಸ್ಮಿಕವಲ್ಲ:ಡಿಕೆಶಿ
ಬೆಂಗಳೂರು, ಅ.14: ''ಅತ್ತಿಬೆಲೆ ಬಳಿಯ ಯಡವನಹಳ್ಳಿ ಚರ್ಚ್ ನಲ್ಲಿ ಉಂಟಾಗಿರುವುದು ಅಗ್ನಿ ಆಕಸ್ಮಿಕವಲ್ಲ.ಇದರ ಹಿಂದೆ ಕೋಮುವಾದಿಗಳ ಹಸ್ತ ಇದೆ. ಇದನ್ನು ಮರೆಮಾಚಲು ಸರಕಾರ ಜನರ ದಿಕ್ಕು ತಪ್ಪಿಸುತ್ತಿದೆ''ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಆರೋಪಿಸಿದರು. ಸೋಮವಾರ ಮುಂಜಾನೆ ಸೇಂಟ್ ಆಂತೋಣಿ ಚರ್ಚ್ ನ ಲಕ್ಷಾಂತರ ಬೆಲೆ ಬಾಳುವ ಪೀಠೋಪಕರಣಗಳು, ಸಂಗೀತ ಉಪಕರಣಗಳು ಬೈಬಲ್ ಸೇರಿದಂತೆ ಅನೇಕ ಗ್ರಂಥಗಳು ಸುಟ್ಟು ಕರಕಲಾಗಿದ್ದವು.
ಹೊಸ ವಿವಾದದಲ್ಲಿ ಚರ್ಚ್
ಇಲ್ಲಿನ ಸೇಂಟ್ ಆಂತೋಣಿ ಚರ್ಚ್ ನಲ್ಲಿ ಸೋಮವಾರ ಬೆಳಗಿನ ಜಾವ ಈ ಘಟನೆ ಸಂಭವಿಸಿತು. ಪೊಲೀಸರ ಪ್ರಕಾರ ಇದು ವಿದ್ಯುತ್ ಶಾರ್ಟ್ ಸರ್ಕ್ಯೂಟ್ . ಆದರೆ ಚರ್ಚ್ ಪಾದ್ರಿ ಸಂತೋಷ್ ಹೇಳುವುದೇ ಬೇರೆ. ಕೆಲವು ಕಿಡಿಗೇಡಿಗಳು ಚರ್ಚ್ ಗೆ ಬೆಂಕಿ ಇಟ್ಟಿದ್ದಾರೆ ಎನ್ನುತ್ತಾರೆ ಅವರು. ಸೇಂಟ್ ಆಂತೋಣಿ ಚರ್ಚ್ ಗೆ ಇಬ್ಬರು ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿದ್ದರೂ ಈ ಘಟನೆ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇಷ್ಟಕ್ಕೂ ನಡೆದದ್ದೇನು?
ಸೋಮವಾರ ಬೆಳಗಿನ ಜಾವ ಸುಮಾರು 1.15ರ ಸಮಯದಲ್ಲಿ ಚರ್ಚ್ ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಚರ್ಚ್ ನಲ್ಲಿದ್ದ ಪುಸ್ತಕ, ಪವಿತ್ರ ಗ್ರಂಥಗಳು, ಅಲ್ಲಿದ್ದ ಬಟ್ಟೆಗಳಿಗೆ ಬೆಂಕಿ ಹಬ್ಬಿತು. ಇದನ್ನು ಕಂಡ ಪೊಲೀಸರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಆದರೆ ಬೆಂಕಿಯ ಕೆನ್ನಾಲಿಗೆ ಪ್ರಖರವಾಗಿದ್ದ ಕಾರಣ ಪೊಲೀಸರು ಬೆಂಕಿಯನ್ನು ನಂದಿಸುವಲ್ಲಿ ವಿಫಲರಾದರು. ನಂತರ ಅಗ್ನಿ ಶಾಮಕ ದಳ ಬಂದು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಯಿತು. ಆದರೆ ಅಷ್ಟೊತ್ತಿಗಾಗಲೆ ಅಲ್ಲಿದ್ದ ವಸ್ತುಗಳೆಲ್ಲ ಅಗ್ನಿಗೆ ಆಹುತಿಯಾಗಿದ್ದವು.
''ಇದು ವಿದ್ಯುತ್ ಶಾರ್ಟ್ ಸರ್ಕ್ಯುಟ್ ನಿಂದ ಆದ ಅವಘಡವಲ್ಲ ಎಂದು ಎಲೆಕ್ಟ್ರಿಕ್ ಇಂಜಿನಿಯರ್ ನೀಡಿರುವ ವರದಿ ತಮ್ಮ ಬಳಿ ಇದೆ. ಇದರ ಹಿಂದೆ ದುಷ್ಕರ್ಮಿಗಳ ಕೈವಾಡ ಇದೆ'' ಎಂದು ಆಂತೋಣಿ ಚರ್ಚ್ ನ ಪಾದ್ರಿ ಸಂತೋಷ್ ಆರೋಪಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಕೋಮು ಗಲಭೆಗೆ ಕ್ರೈಸ್ತ ಸಂಘಟನೆಗಳೆ ಕಾರಣ: ಬಿಎಸ್ ವೈ
ಸದ್ಯಕ್ಕೆ ಭಜರಂಗದಳದ ನಿಷೇಧವಿಲ್ಲ: ಕೇಂದ್ರ












Click it and Unblock the Notifications