ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ:ರೆಡ್ಡಿ

By Staff
|
Google Oneindia Kannada News

ಚಿತ್ರದುರ್ಗ,ಅ.8:ಕೃಷಿ ಉತ್ಪನ್ನಗಳಿಗೆ ವ್ಶೆಜ್ಞಾನಿಕ ಬೆಲೆ ನಿಗದಿಗೊಳಿಸಬೇಕು ಹಾಗೂ ಈಗಿರುವ ಬೆಳೆವಿಮೆ ಪದ್ಧತಿಯನ್ನು ಹೋಬಳಿ ಮಟ್ಟದಿಂದ ಗ್ರಾಮಪಂಚಾಯಿತಿ ಮಟ್ಟಕ್ಕೆ ತಂದಲ್ಲಿ ರೈತಸಮುದಾಯಕ್ಕೆ ಅನುಕೂಲವಾಗಬಹುದೆಂದು ಕಂದಾಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಜಿ.ಕರುಣಾಕರರೆಡ್ಡಿಯವರು ತಿಳಿಸಿದರು.

ಮುರುಘಾ ಶರಣರ 'ಅಗ್ನಿಗಾನ'
ಸಚಿವರು ಮಂಗಳವಾರ ಸಂಜೆ ಶರಣಸಂಸ್ಕೃತಿ ಉತ್ಸವದಲ್ಲಿ ಆಯೋಜಿಸಲಾಗಿದ್ದ ರೈತ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಬೆಲೆನಿಗದಿ ಹಾಗೂ ಬೆಳೆವಿಮಾ ಪದ್ಧತಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಬೇಕಾಗಿರುವುದರಿಂದ ಅಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ತಿಳಿಸಿದರು. ರಾಜ್ಯ ಸರ್ಕಾರ ರೈತರ ಏಳಿಗೆಗೆ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಿದೆ. 10ಅಶ್ವಶಕ್ತಿವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಶೇ.3 ರ ಬಡ್ಡಿ ದರದಲ್ಲಿ ಸಾಲ ನೀಡಿಕೆ, ಬಿತ್ತನೆ ಬೀಜಕ್ಕೆ ಸಹಾಯಧನ, ಸಾವಯವ ಕೃಷಿಗೆ ಪ್ರೋತ್ಸಾಹ ಇತ್ಯಾದಿ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ ಎಂದು ತಿಳಿಸಿದರು. ಬರಪೀಡಿತ ಚಿತ್ರದುರ್ಗ ಜಿಲ್ಲೆಯ ರೈತರ ಸಂಕಷ್ಟಗಳನ್ನು ಪಾರುಮಾಡಲು ಭದ್ರಾ ಮೇಲ್ದಂಡೆ ಯೋಜನೆಯನ್ನು ಜಾರಿಗೊಳಿಸಲು 3388 ಕೋಟಿ ರು.ಗಳ ಹಣ ನಿಗದಿಪಡಿಸಿದ್ದು ಕಾಮಗಾರಿ ಕೆಲಸ ಪ್ರಾರಂಭಿಸಲಾಗುವುದೆಂದು ಸಚಿವರು ತಿಳಿಸಿದರು. ಈ ಸಂದರ್ಭದಲ್ಲಿ ಮುರುಘಾ ಶರಣರು ಹೊರತಂದ 'ಅಗ್ನಿಗಾನ' ಎಂಬ ಕೃತಿ ಬಿಡುಗಡೆ ಮಾಡಿದರು.

ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನ
ಕೃಷಿ ಸಚಿವರಾದ ಎಸ್.ಎ.ರವೀಂದ್ರನಾಥ್ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ ರೈತರ ಕಷ್ಟ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೆ ಆದಷ್ಟು ಹೆಚ್ಚಿನ ಸಹಾಯಸೌಲಭ್ಯಗಳನ್ನು ನೀಡುವಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಕೃಷಿ ಉಪಕರಣಗಳು, ಬಿತ್ತನೆ ಬೀಜ ಪೂರೈಕೆಗೆ ಸಹಾಯಧನ ನೀಡಿಕೆ, ಸಾವಯವ ಕೃಷಿಗೆ ಆದ್ಯತೆ ನೀಡಿದೆ ಎಂದು ಸಚಿವರು ತಿಳಿಸಿ, ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ ಸರ್ಕಾರ ಆಯವ್ಯಯದಲ್ಲಿ ಅನುದಾನ ಒದಗಿಸಿದ್ದು ಕಾರ್ಯಾರಂಭಕ್ಕೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.

ರೇಷ್ಮೆ ಗೂಡಿಗೆ ವೈಜ್ಞಾನಿಕ ಬೆಲೆ
ಕರ್ನಾಟಕ ವಿಧಾನಪರಿಷತ್ ಮುಖ್ಯ ಸಚೇತಕರಾದ ಡಾ. ಎ.ಹೆಚ್.ಶಿವಯೋಗಿಸ್ವಾಮಿ ಅವರು ಮಾತನಾಡಿದರು. ಕೇಂದ್ರ ರೇಷ್ಮೆಮಂಡಳಿ ಅಧ್ಯಕ್ಷರಾದ ಹೆಚ್.ಹನುಮಂತಪ್ಪ ಅವರು ಮಾತನಾಡಿ ರೈತ ಇಂದು ಅನೇಕ ಸಮಸ್ಯೆಗಳನ್ನು, ತೊಂದರೆಗಳನ್ನು ಎದುರಿಸುತ್ತಿದ್ದಾನೆ. ಸಕಾಲಕ್ಕೆ ಸರಿಯಗಿ ಬಿತ್ತನೆಬೀಜ, ರಸಗೊಬ್ಬರ, ಆರ್ಥಿಕ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಪೂರ್ವಭಾವಿಯಾಗಿ ಕೃಷಿ ಇಲಾಖೆ ಈ ಬಗ್ಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಕೃಷಿ ಚಟುವಟಿಕೆಗೆ ಸೌಲಭ್ಯ ಕಲ್ಪಿಸಿಕೊಟ್ಟಾಗ ರೈತನಿಗೆ ಅನುಕೂಲವಾಗುವುದೆಂದು ತಿಳಿಸಿದರು. ರಾಜ್ಯದಲ್ಲಿ 8240 ಮೆಟ್ರಿಕ್‌ಟನ್ ರೇಷ್ಮೆ ಉತ್ಪಾದನೆಯಾಗುತ್ತದೆ. 15ಲಕ್ಷ ರೇಷ್ಮೆ ಕೃಷಿ ಕೈಗೊಂಡಿದ್ದಾರೆ ಎಂದು ತಿಳಿಸಿದ ಅವರು ರೇಷ್ಮೆ ಗೂಡಿಗೆ ವೈಜ್ಞಾನಿಕ ಬೆಲೆಯನ್ನು ನಿಗದಿಪಡಿಸುವ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಲಾಗುವುದು ಎಂದು ತಿಳಿಸಿದರು.

ಅನ್ನಕ್ಕಾಗಿ ಹೊಡೆದಾಡುವ ಸ್ಥಿತಿ
ಈಗಾಗಲೇ ಒಂದು ಸಭೆಯನ್ನು ನೆಡೆಸಿದೆ ಎಂದು ಅವರು ತಿಳಿಸಿದರು. ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ ನೀರು ಮತ್ತು ವಿದ್ಯುತ್‌ನ್ನು ಆದ್ಯತೆಯ ವಲಯವೆಂದು ಗುರುತಿಸಿ ತೀರ್ಮಾನ ತೆಗೆದುಕೊಂಡಾಗ ಸುಸ್ಥಿರ ಕೃಷಿ ಸಾಧ್ಯವೆಂದು ತಿಳಿಸಿದ ಅವರು ಆದಾಯದ ಶೇ.75 ರಷ್ಟು ಕೃಷಿ ಮೇಲೆಯೇ ಅವಲಂಬಿತವಾಗಿದೆ. ಶೇ.67 ರಷ್ಟು ಉದ್ಯೋಗ ಕೃಷಿ ಕ್ಷೇತ್ರದಿಂದಲೇ ಬರುವುದೆಂದು ತಿಳಿಸಿದರು. ಕೃಷಿ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಿದಲ್ಲಿ ಇನ್ನು ಹತ್ತು ವರ್ಷಗಳಲ್ಲಿ ಅನ್ನಕ್ಕೆ ಅಭಾವ ಬಂದು ಹೊಡೆದಾಡುವ ಸ್ಥಿತಿ ಬರುವುದೆಂದು ಎಚ್ಚರಿಕೆ ನೀಡಿದರು.

ರೈತರು ಸಮಾಜದ ಅವಿಭಾಜ್ಯ ಅಂಗ
ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಮಾತನಾಡಿ ಕೃಷಿ ಉತ್ಪನ್ನಗಳಿಗೆ ವ್ಶೆಜ್ಞಾನಿಕಬೆಲೆ ನೀತಿಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು. ಬಂಗಾರಪದಕ ವಿಜೇತರಾದ ಎಸ್.ಸಮೀವುಲ್ಲಾ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮುರುಘಾಮಠದ ಶಿವಮೂರ್ತಿ ಶರಣರು ಆಶೀರ್ವಚನ ನೀಡಿ ಮಾತನಾಡಿ ರೈತರು ಸಮಾಜದ ಅವಿಭಾಜ್ಯ ಅಂಗವಾಗಿದ್ದು ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ರೈತರು ಬದುಕಿನಲ್ಲಿ ಹತಾಶೆಯನ್ನು ತಂದುಕೊಳ್ಳದೆ ಭರವಸೆಯನ್ನು ತಂದುಕೊಂಡು ಜೀವನ ನಡೆಸುವ ಧೈರ್ಯವನ್ನು ಮಾಡಬೇಕಾಗಿದೆ ಎಂದು ತಿಳಿಸಿದರು. ಈ ಸಮಾರಂಭದಲ್ಲಿ ಗಣ್ಯರು, ಹರಗುರು ಚರಮೂರ್ತಿಗಳು ಭಾಗವಹಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X