ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ

By Staff
|
Google Oneindia Kannada News

Yakshagana exponent Sheny Gopalakrishna Bhatಎಲ್ಲೆಂದರಲ್ಲಿ ಕೇಳುವ ಎಫ್.ಎಂ. ರೇಡಿಯೊ ವಾಹಿನಿಗಳಲ್ಲಿ ಆರ್.ಜೆ.ಗಳ ಚಟಪಟ ಮಾತು ನಿಮಗೆ ಗೊತ್ತು. ಆದರೆ ಇಲ್ಲಿದೆ ಅದಕ್ಕಿಂತ ಮಿಗಿಲಾದ ಗಮ್ಮತ್ತು. ಸಶರೀರಿಗಳಾಗಿಯೇ ಹದಿನಾಲ್ಕು ಲೋಕಗಳನ್ನು ಸುತ್ತುವ ಅವಕಾಶ ಈಗ ಬೆಂಗಳೂರಿಗರಿಗೆ ಲಭ್ಯ. ಎಲ್ಲವೂ ಬಾಯಿ ಮಾತಿನಲ್ಲೇ! ಇಲ್ಲಿಯ ಮಾತಿನಲ್ಲಿ ಲೌಕಿಕವೂ ಅಲೌಕಿಕವೂ ಇದೆ. ಪುರಾಣ-ವರ್ತಮಾನಗಳ ಮಿಶ್ರಣವಿದೆ. ಪುರಾಣದ ಕಥಾಹಂದರದ ಆಧಾರದಲ್ಲಿ , ಎಲ್ಲವನ್ನು ಒಳಗೊಳ್ಳುತ್ತ ಬೆಳೆಯುವ ಮಾತುಗಾರಿಕೆಯ ಒಂದು ಬಗೆ ಅದು. ರಾಮಾಯಣ-ಮಹಾಭಾರತಗಳ ಪಾತ್ರ ಪ್ರಪಂಚದಲ್ಲಿ ಸುತ್ತಾಡಲು ಅವಶ್ಯ ಬನ್ನಿ.

ಉತ್ತರ ಕನ್ನಡದಲ್ಲಿ ಪ್ರಸಂಗ ಅಥವಾ ಬೈಠಕ್ ಎಂದು, ಶಿವಮೊಗ್ಗ ಭಾಗದಲ್ಲಿ ಜಾಗರ ಎಂದು, ದಕ್ಷಿಣಕನ್ನಡ ಭಾಗದಲ್ಲಿ ಕೂಟ ಎಂದೂ ಕರೆಯಲ್ಪಡುವ 'ಯಕ್ಷಗಾನ ತಾಳಮದ್ದಳೆ ' ಯಕ್ಷಲೋಕದ ಅವಿಭಾಜ್ಯ ಅಂಗ. ಪುರಾಣಗಳ ಒಂದು ಚಿಕ್ಕ ಪ್ರಸಂಗ ಆಯ್ದುಕೊಂಡು, ವೇಷಭೂಷಣವಿಲ್ಲದೆ, ಅರ್ಥಧಾರಿಗಳು ಒಂದೊಂದು ಪಾತ್ರ ವಹಿಸಿಕೊಂಡು ಮಾತಿನಲ್ಲೇ ಎಲ್ಲವನ್ನೂ ನಿರ್ವಹಿಸುತ್ತಾರೆ. ಅದೂ ಕಂಠಪಾಠವಲ್ಲದ ಆಶುಶೈಲಿ. ಇದಿರು ಅರ್ಥಧಾರಿಯ ಮನೋಧರ್ಮ, ಆಯಾ ಸಂದರ್ಭಗಳಿಗೆ ಅನುಗುಣವಾಗಿ, ಇಂದು ಕರ್ಣನ ಪಾತ್ರ ವಹಿಸಿದವನು ನಾಳೆ ಅದೇ ಪಾತ್ರವನ್ನು ಸಂಪೂರ್ಣ ಬೇರೆ ಥರ ನಿರ್ವಹಿಸಬಹುದು. ಕೌರವನೊಡನೆ ವಾದದಲ್ಲಿ ಕೃಷ್ಣ ಸೋಲಬಹುದು! ಹೀಗೆ ಇದು ಅನಿರೀಕ್ಷಿತಗಳ ಸಂಗಮ. ವಿದ್ವತ್ತು, ಮಾತಿನ ಜಾಣ್ಮೆ, ತರ್ಕ, ಉದಾಹರಿಸುವ ಕೌಶಲ, ಹಾಸ್ಯ ಪ್ರಜ್ಞೆ, ಲೌಕಿಕ-ಸಮಕಾಲೀನ ವಿಷಯಗಳನ್ನು ಪ್ರಸಂಗಕ್ಕೆ ಹೊಂದಿಸುವ ಶಕ್ತಿ ಎಲ್ಲವೂ ಇಲ್ಲಿರಬೇಕು.

ಚೆಂಡೆ-ಮದ್ದಳೆ ವಾದಕರು, ಭಾಗವತರ ಹಿಮ್ಮೇಳ ಹಾಗೂ ಅರ್ಥಧಾರಿಗಳ ಮುಮ್ಮೇಳವಿದ್ದರೆ ಸಾಕು, ದೇವಸ್ಥಾನದ ಪ್ರಾಂಗಣದಲ್ಲೋ, ಮನೆಯ ವರಾಂಡದಲ್ಲೋ, ಮದುವೆ ಮಂಟಪಗಳಲ್ಲೋ ತಾಳಮದ್ದಳೆ ನಡೆಯುತ್ತದೆ. ಆದರೆ ಬೆಂಗಳೂರಿನಲ್ಲಿ ಯಕ್ಷಗಾನ ಪ್ರದರ್ಶನಗಳಿಗೆ ಹೋಲಿಸಿದರೆ ತಾಳಮದ್ದಳೆಯ ಸಂಖ್ಯೆ ಅತ್ಯಂತ ಕಡಿಮೆ. ಹಾಗಾಗಿ ಇಲ್ಲಿನ ಆಸಕ್ತರಿಗೆ ಮಾತಿನ ಮಾಂತ್ರಿಕತೆಯಲ್ಲಿ ಮೈಮರೆಯಲು ಅನುಕೂಲಕರ ಸಂದರ್ಭವೊಂದನ್ನು ಗಿರಿನಗರದ 'ಶ್ರೀ ದುರ್ಗಾಂಬಾ ಕಲಾ ಸಂಗಮ' ನೀಡುತ್ತಿದೆ. ಈ ಸಂಸ್ಥೆ ಕಳೆದೊಂದು ವರ್ಷದಿಂದ ನಗರದಲ್ಲಿ ಸದಭಿರುಚಿಯ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಕರ್ನಾಟಕ-ಕೇರಳ ರಾಜ್ಯಗಳ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರು ವಿ.ವಿ.ಯ ಗೌರವ ಡಾಕ್ಟರೇಟ್, ಪಡೆದ ಮಾತಿನ ಮಹಾಕವಿ ಡಾ.ಶೇಣಿ ಗೋಪಾಲಕೃಷ್ಣ ಭಟ್ (1918-2006), ಯಕ್ಷಲೋಕದ ಸಾಮ್ರಾಟರಲ್ಲಿ ಒಬ್ಬರು. ತಾಳಮದ್ದಳೆಯಲ್ಲಂತೂ ಅವರು ಉತ್ತುಂಗ ಶಿಖರ. ಹೀಗಾಗಿ ಡಾ. ಶೇಣಿ ಸಂಸ್ಮರಣೆ ಮತ್ತು ಯಕ್ಷಗಾನ ಅಕಾಡೆಮಿ ಪ್ರಥಮ ಅಧ್ಯಕ್ಷ ಕುಂಬ್ಳೆ ಸುಂದರರಾವ್ ಅಭಿನಂದನೆಯೊಂದಿಗೆ ಏಳು ದಿನಗಳ ಯಕ್ಷಗಾನ ತಾಳಮದ್ದಳೆ ಸಪ್ತಾಹ ಅ.13ರಿಂದ 19ರವರೆಗೆ ತೆಂಕು-ಬಡಗು ತಿಟ್ಟುಗಳ ಕಲಾವಿದರ ಸಮ್ಮಿಲನದೊಂದಿಗೆ ನಡೆಯಲಿದೆ. ಕಳೆದೊಂದು ವರ್ಷದಿಂದ ಸತತವಾಗಿ ಸದಭಿರುಚಿಯ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಗಿರಿನಗರದ 'ಶ್ರೀ ದುರ್ಗಾಂಬಾ ಕಲಾ ಸಂಗಮ' ಎಂಬ ಸಂಘಟನೆಯು ಈ ಸಪ್ತಾಹವನ್ನು ಸಂಯೋಜಿಸಿದೆ.

ತಾಳಮದ್ದಳೆ ಕ್ಷೇತ್ರದ ಹಿರಿಯ ಅರ್ಥಧಾರಿಗಳಾಗಿರುವ ಡಾ.ಎಂ. ಪ್ರಭಾಕರ ಜೋಶಿ, ಶಂಭು ಶರ್ಮ ವಿಟ್ಲ, ಉಮಾಕಾಂತ ಭಟ್ ಮೇಲುಕೋಟೆ, ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ, ಜಬ್ಬಾರ್ ಸಮೊ ಸಂಪಾಜೆ ಮೊದಲಾದವರು ಕರ್ನಾಟಕದ ನಾನಾ ಭಾಗಗಳಿಂದ ಆಗಮಿಸುತ್ತಾರೆ. 13ರಂದು ಕರ್ಣಪರ್ವ, 14-ವಾಲಿ ಮೋಕ್ಷ, 15-ಭೀಷ್ಮ ವಿಜಯ, 16-ಶೂರ್ಪನಖಾ ಮಾನಭಂಗ, 17-ರಾವಣ ವಧೆ, 18-ಶ್ರೀಕೃಷ್ಣ ಸಂಧಾನ, 19-ಸುದರ್ಶನ ಗ್ರಹಣ- ಪ್ರಸಂಗಗಳು 'ಕನ್ನಡ ಮತ್ತು ಸಂಸ್ಕೃತಿ ಇಲಾಖೆ 'ಯ ಸಹಯೋಗದಲ್ಲಿ, ತೆಂಕು-ಬಡಗು ತಿಟ್ಟುಗಳ ಸಮ್ಮಿಲನದಲ್ಲಿ ನಡೆಯಲಿವೆ.

13ರಂದು ಸಂಜೆ 4.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಯಕ್ಷಗಾನ ಯೋಗಕ್ಷೇಮ ಅಭಿಯಾನದ ವಿ.ಆರ್.ಹೆಗಡೆ, ಯಕ್ಷಗಾನ ವಿಮರ್ಶಕ ಡಾ.ಎಂ.ಪ್ರಭಾಕರ ಜೋಶಿ, ಹಿರಿಯ ಸಮಾಜಸೇವಕ ಬಿ.ಕೃಷ್ಣ ಭಟ್, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಕುಂಬ್ಳೆ ಸುಂದರರಾವ್, ಕರ್ನಾಟಕ ಬ್ಯಾಂಕ್ ಮುಖ್ಯ ಪ್ರಬಂಧಕ ಆನಂದರಾಮ ಉಪಾದ್ಯಾಯ, ಸಂಗೀತ ನಿರ್ದೇಶಕ ವಿ.ಮನೋಹರ್, ಎ.ಶಿವರಾವ್ ಅತಿಥಿಗಳಾಗಿ ಭಾಗವಹಿಸುತ್ತಾರೆ. 19ರಂದು ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ, ಕೆ.ಐ.ಎ.ಡಿ.ಬಿ. ಆಯುಕ್ತ ಟಿ.ಶ್ಯಾಮ ಭಟ್, ಬಸವನಗುಡಿ ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ, ಗಾಯಕ ವಿದ್ಯಾಭೂಷಣ, ಕೆ.ಇ.ರಾಧಾಕೃಷ್ಣ ಮೊದಲಾದವರು ಭಾಗವಹಿಸುತ್ತಾರೆ. ಪ್ರತಿದಿನ ಸಂಜೆ 5ರಿಂದ 9ರವರೆಗೆ ತಾಳಮದ್ದಳೆ.

ಸ್ಥಳ : ಶ್ರೀ ಪುತ್ತಿಗೆ ಮಠದ ಸಭಾಂಗಣ, ಬಸವನಗುಡಿ. (ಬ್ಯೂಗಲ್ ರಾಕ್ ಹೋಟೆಲ್ ಬಳಿ) ಪ್ರವೇಶ ಉಚಿತ. ಹೆಚ್ಚಿನ ಮಾಹಿತಿಗೆ - 99725 27677, 99001 59201

(ಮಾಹಿತಿ : ಸ್ನೇಹಿತ ಸುಧನ್ವ ದೇರಾಜೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X