ಕಾರಿಡಾರ್ ಯೋಜನೆ ತನಿಖಾ ಆಯೋಗ ರದ್ದು
ಬೆಂಗಳೂರು, ಅ. 7 : ಬೆಂಗಳೂರು ಮೈಸೂರು ಕಾರಿಡಾರ್ ಎಕ್ಸ್ ಪ್ರೆಸ್ (ಬಿಎಂಐಸಿ) ಯೊಜನೆಯ ಜಮೀನು ವಿವಾದ ಕುರಿತಂತೆ ತನಿಖೆ ಮಾಡಲು ನೇಮಿಸಲಾಗಿದ್ದ ನ್ಯಾಯಾಧೀಶ ಬಿ.ಸಿ.ಪಾಟೀಲ್ ನೇತೃತ್ವದ ಆಯೋಗವನ್ನು ರದ್ದುಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಬಿ.ಸಿ.ಪಾಟೀಲ್ ಅವರು ತನಿಖೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಹಾಗೂ ಪ್ರಕರಣ ಸುಪ್ರಿಂಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಈ ಆಯೋಗದ ತನಿಖೆಯನ್ನು ಮುಂದುವರೆಸುವ ಅಗತ್ಯವಿಲ್ಲ ಎಂದು ಸಂಪುಟ ಸಭೆಯಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ ಎಂದು ಗೃಹ ಸಚಿವ ವಿ.ಎಸ್.ಆಚಾರ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಿಎಂಐಸಿ ಯೋಜನೆಯಲ್ಲಿ ಕೆಲ ರಸ್ತೆಗಳಿಗೆ ಸಂಪರ್ಕ ಸಾಧಿಸುವ ಸಲುವಾಗಿ 102 ಎಕರೆ ಭೂಮಿಯನ್ನು ನೀಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ಮೈಸೂರಿನಲ್ಲಿ ದೇವರಾಜು ಅರಸು ಟರ್ಕ್ ಟರ್ಮಿನಲ್ ನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ 84 ಲಕ್ಷ ರುಪಾಯಿಗಳನ್ನು ನೀಡಲಾಗಿದೆ ಎಂದು ಆಚಾರ್ಯ ಸ್ಪಷ್ಟಪಡಿಸಿದರು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಎಂಐಸಿ ತನಿಖೆಗೆ ಬಿ.ಸಿ.ಪಾಟೀಲ್ ನೇತೃತ್ವದ ಆಯೋಗವನ್ನು ರಚಿಸಲಾಗಿತ್ತು.
ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಹಳೆಯ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯನ್ನು ಜಾರಿಗೊಳಿಸಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ತಕ್ಷಣವೇ ಸುಗ್ರಿವಾಜ್ಞೆ ಹೊರಡಿಸಿ ಸ್ವಯಂ ಘೋಷಿತ ತೆರಿಗೆ ಪದ್ಧತಿಯನ್ನು ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು. .
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications