'ಕೈ' ಬಲಪಡಿಸಿ ಸರ್ವಜನರ ಸರ್ಕಾರ ತರೋಣ
ದೊಡ್ಡಬಳ್ಳಾಪುರ (ಭಗತ್ ಸಿಂಗ್ ಮೈದಾನ), ಅ. 6 : ರಾಜ್ಯದಲ್ಲಿ ಒಂದು ಕೋಮಿಗೆ ಸಂಬಂಧಿಸಿದ ಸರ್ಕಾರ ಅಧಿಕಾರದಲ್ಲಿದೆ. ಸರ್ವ ಜನಾಂಗದ ಸರ್ಕಾರ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯಬೇಕಾದರೆ ಕಾಂಗ್ರೆಸ್ ಪಕ್ಷದ 'ಕೈ' ಬಲಪಡಿಸಿ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಭಾವೋದ್ವೇಗದ ನುಡಿಗಳು.
ನಗರದಲ್ಲಿ ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಅದ್ಧೂರಿ ಸಾರ್ವಜನಿಕ ಸಮಾರಂಭದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಭ್ರಷ್ಟ ಸರ್ಕಾರವನ್ನು ಕಿತ್ತೆಸೆಯಲು ಸಂಕಲ್ಪ ಮಾಡಿ, ರಾಜ್ಯದ ಉದ್ದಗಲಕ್ಕೂ ಪ್ರತಿಭಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ, ಆ ಮೂಲಕ ದೀನ ದಲಿತರ, ಅಲ್ಪಸಂಖ್ಯಾತರ ಸರ್ಕಾರವನ್ನು ಅಧಿಕಾರ ತರೋಣ ಎಂದು ಹೇಳುವ ಮೂಲಕ ಅಲ್ಲಿ ನೆರೆದಿದ್ದ ಸಾವಿರಾರು ಕಾರ್ಯಕರ್ತರಲ್ಲಿ ಸ್ಪೂರ್ತಿ ತುಂಬಿದರು.
ಪಕ್ಷದ ವರಿಷ್ಠರು ನನ್ನ ಮೇಲೆ ಅಪಾರ ಭರವಸೆ ಇಟ್ಟು ಕಾರ್ಯಾಧ್ಯಕ್ಷ ಪದವಿ ನೀಡಿದ್ದಾರೆ. ವರಿಷ್ಠರ ಆಶಯ ಈಡೇರಬೇಕು ಎಂದರೆ, ಯುವಕರಿಗೆ ಶಕ್ತಿ ನೀಡಬೇಕು. ಇಂದಿನಿಂದಲೇ ಪಕ್ಷದಲ್ಲಿರುವ ಯುವಕರನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಭ್ರಷ್ಟಾಚಾರದಲ್ಲಿ ತೊಡಗಿದೆ. ಅಲ್ಪಸಂಖ್ಯಾತರು ಭಯದ ನೆರಳಲ್ಲಿ ಬದುಕುವ ಸ್ಥಿತಿ ನಿರ್ಮಾಣ ಉಂಟಾಗಿದೆ. ಅಭಿವೃದ್ಧಿ ಕಾಮಗಾರಿಗಳು ಕನಸಾಗಿವೆ. ಸರ್ಕಾರ ಅಧಿಕಾರ ಮದದಲ್ಲಿ ಮಜಾ ಉಡಾಯಿತೊಡಗಿದೆ. ಅಧಿಕಾರಕ್ಕೆ ಬಂದು ನಾಲ್ಕು ತಿಂಗಳ ಅವಧಿಯಲ್ಲೇ ಅನೇಕ ಹಗರಣಗಳನ್ನು ಸೃಷ್ಟಿಸಿದೆ. ಅಪರೇಶನ್ ಕಮಲ ಮೂಲಕ ಸಂವಿಧಾನ ವಿರೋಧಿ ಕೃತ್ಯ ಎಸಗಿದೆ. ಜನರಿಗೆ ಬೇಡವಾಗಿರುವ ಉಪಚುನಾವಣೆ ಎದುರಿಸುವ ಪರಿಸ್ಥಿತಿ ಉಂಟು ಮಾಡಿದೆ. ಸರ್ಕಾರದ ವೈಫಲ್ಯಗಳ ಪಟ್ಟಿ ಮಾಡುತ್ತಾ ಹೋದರೆ ದೊಡ್ಡ ಸರಮಾಲೆ ಆಗುತ್ತದೆ. ಆದ್ದರಿಂದ ಕಾರ್ಯಕರ್ತರೆ, ಜನವಿರೋಧಿ ಸರ್ಕಾರ ಹೊಡೆದೊಡಿಸಲು ಕಂಕಣಬದ್ಧರಾಗಿ ದುಡಿಯೋಣ. ರಾಜ್ಯವನ್ನು ಆಳುತ್ತಿರುವ ಕೋಮುವಾದಿ ಪಕ್ಷವನ್ನು ಸೋಲಿಸೋಣ ಎಂದು ಶಿವಕುಮಾರ್ ಉದ್ವೇಗದ ಭಾಷಣ ಮಾಡಿದರು.
ಇದಕ್ಕೂ ಮುಂಚೆ ಪಕ್ಷದ ನೂತನ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿದ, ಸರ್ಕಾರದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು. ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ನಾಯಕರಾದ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಸೇರಿ ಅನೇಕ ಮುಖಂಡರು ಭಾಗವಹಿಸಿದ್ದರು. ಮುಂಬರುವ ಉಪಚುನಾವಣೆಯ ಪೂರ್ವಭಾವಿಯ ತಾಲೀಮು ಎಂದೇ ಬಿಂಬತವಾಗಿದ್ದ ಈ ಸಮಾರಂಭಕ್ಕೆ ರಾಜ್ಯದ ಮೂಲೆಮೂಲೆಯಿಂದ ಪಕ್ಷದ ಕಾರ್ಯಕರ್ತರು ಆಗಮಿಸಿದ್ದರು. ದೊಡ್ಡಬಳ್ಳಾಪುರ ನಗರ ಕೈ ಬಾವುಟಗಳಿಂದ ಮಿಂದು ಹೋಗಿತ್ತು. ವರಿಷ್ಠೆ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರ ಭಾವಚಿತ್ರ ಎಲ್ಲಡೆ ರಾರಾಜಿಸುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು.
(ದಟ್ಸ್ ಕನ್ನಡ ವಾರ್ತೆ)
ಬಿಜೆಪಿ ವಿರುದ್ಧ ಕಾಂಗ್ರೆಸ್ ನ ಕಾಲ್ನಡಿಗೆ ಜಾಥಾ
ಜೆಡಿಎಸ್ ಜತೆ ಮೈತ್ರಿ ಹೈಕಮಾಂಡ್ ಗೆ ಕೈಲಿದೆ












Click it and Unblock the Notifications