ಕಾಣದ ಕೈಗಳ ವ್ಯವಸ್ಥಿತ ಸಂಚು : ಯಡಿಯೂರಪ್ಪ ಆರೋಪ
ಬೆಂಗಳೂರು, ಸೆ. 21 : ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ಮರಿಯಣ್ಣನ ಪಾಳ್ಯದಲ್ಲಿ ಚರ್ಚ್ ಮೇಲೆ ನಡೆದಿರುವ ದಾಳಿಯ ಹಿಂದೆ ಕಾಣದ ಕೈಗಳ ವ್ಯವಸ್ಥಿತ ಸಂಚಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ. ಸರ್ಕಾರಕ್ಕೆ ಮಸಿ ಬಳಿಯುವ ಇಂಥ ಕಾರ್ಯ ಯಾರೇ ಮಾಡಿರಲಿ ಅವರ ವಿರುದ್ಧ ತೀವ್ರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಮಂಗಳೂರಿನಲ್ಲಿ ನಡೆಯುತ್ತಿದ್ದ ಚರ್ಚ್ ಗಳ ಮೇಲಿನ ದಾಳಿ ತಹಬಂದಿಗೆ ಬಂದಿತು ಎಂದು ನಿಟ್ಟುಸಿರು ಬಿಡುತ್ತಿದ್ದಂತೆಯೇ ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಚರ್ಚ್ ಗಳ ಮೇಲೆ ದಾಳಿ ನಡೆದಿದೆ. ಉತ್ತರ ಬೆಂಗಳೂರಿನ ಲುಂಬಿಣಿ ಗಾರ್ಡನ್ ಬಳಿಯಿರುವ ಮರಿಯಣ್ಣ ಪಾಳ್ಯದ ಸೇಂಟ್ ಜೇಮ್ಸ್ ರೋಮನ್ ಕ್ಯಾಥೊಲಿಕ್ ಚರ್ಚ್ ಹಾಗೂ ರಾಜರಾಜೇಶ್ವರಿ ನಗರದಲ್ಲಿರುವ ಹೋಲಿ ನೇಮ್ ಆಫ್ ಜೀಸಸ್ ಕ್ರೈಸ್ಟ್ ಚರ್ಚ್ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿ ಬಾಗಿಲು, ಪಿಠೋಪಕರಣ ಹಾಗೂ ಕಿಟಕಿ ಗಾಜುಗಳನ್ನು ಧ್ವಂಸಗೊಳಿಸಿರುವ ಘಟನೆ ಜರುಗಿದೆ. ಕಿಡಿಗೇಡಿಗಳು ಚರ್ಚ್ ನ ಹುಂಡಿ ಲಪಟಾಯಿಸಲು ಪ್ರಯತ್ನಿಸಿದ್ದರೆಂದು ಪೊಲೀಸರು ಹೇಳಿದ್ದಾರೆ.
ಕಳ್ಳರ ಕೆಲಸ : ಮತಾಂತರಕ್ಕೂ ಬೆಂಗಳೂರಿನ ಚರ್ಚ್ ಮೇಲೆ ಆದ ದಾಳಿಗೂ ಸಂಬಂಧವಿಲ್ಲ. ಇದು ಕಳ್ಳರ ಕೆಲಸವಾಗಿದ್ದು, ಮರಿಯಣ್ಣನ ಪಾಳ್ಯದಲ್ಲಿರುವ ಚರ್ಚ್ ಹಿಂಬಾಗಿಲಿನಿಂದ ಒಳನುಗ್ಗಿರುವ ಕಿಡಿಗೇಡಿಗಳು ಲಾಕರ್ ಗಳನ್ನು ಒಡೆದು ಹಣ ದೋಚಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಶಂಕರ್ ಬಿದರಿ ಹೇಳಿದ್ದಾರೆ. ಯಾವುದೇ ಕೋಮಿನವರು ಮತ್ತು ಪ್ರತಿಭಟನಾಕಾರರು ಯಾವುದೇ ಗಾಳಿ ಮಾತುಗಳಿಗೆ ಕಿವಿಗೊಡಬಾರದು ಮತ್ತು ಶಾಂತಿಯನ್ನು ಕಾಪಾಡಲು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
ಚರ್ಚ್ ಮೇಲೆ ದಾಳಿ ನಡೆದ ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಈಗಾಗಲೇ ಏಳು ಮಂದಿ ಕಿಡಿಗೇಡಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಪ್ರತಿಭಟನೆ ತೀವ್ರಗೊಳ್ಳುವ ನಿರೀಕ್ಷೆ ಹಿನ್ನೆಲೆಯಲ್ಲಿ ಸಾಕಷ್ಟು ಭದ್ರತೆಯನ್ನು ನಿಯೋಜಿಸಲಾಗಿದೆ. ಭದ್ರತಾ ಮೀಸಲು ಪಡೆ, ಗೃಹ ರಕ್ಷಕದಳ ಹಾಗೂ ಸಾಕಷ್ಟು ಸಂಖ್ಯೆಯ ಪೊಲೀಸರು ಘಟನಾ ಸ್ಠಳದಲ್ಲಿ ಬೀಡುಬಿಟ್ಟಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.
ಪ್ರತಿಭಟನೆ : ಚರ್ಚ್ ಮೇಲಿನ ದಾಳಿಯನ್ನು ಖಂಡಿಸಿ ಕ್ರೈಸ್ತರು ಉಗ್ರ ಪ್ರತಿಭಟನೆಗೆ ಮುಂದಾಗಿದ್ದಾರೆ. ಹೆಬ್ಬಾಳದ ರಿಂಗ್ ರಸ್ತೆಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸತೊಡಗಿದ್ದಾರೆ. ರಾಜರಾಜೇಶ್ವರ ನಗರದ ಚರ್ಚ್ ಮುಂದೆ ಸಾವಿರಾರು ಜನರು ಸೇರಿ ಪ್ರತಿಭಟನೆ ನಡೆಸುತ್ತಿದ್ದು, ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿರುವುದು ಈ ಘಟನೆಗಳು ನಡೆಯತೊಡಗಿವೆ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.
ತುರ್ತು ಸಭೆ : ಘಟನೆ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ಯಡಿಯೂರಪ್ಪ ತುರ್ತು ಸಚಿವ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಗೃಹ ಸಚಿವ ವಿ.ಎಸ್.ಆಚಾರ್ಯ ಸೇರಿದಂತೆ ಸಂಪುಟದ ಹಿರಿಯ ಸಚಿವರು ಹಾಗೂ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ಘಟನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಇಲ್ಲದ ಸಲ್ಲದ ಮಾತುಗಳನ್ನಾಡುತ್ತಿರುವ ಪ್ರತಿಪಕ್ಷಗಳ ನಾಯಕರು ಶಾಂತಿ ಭಂಗದ ತರಲು ಯತ್ನಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications