ದಿಲ್ಲಿ ಸ್ಫೋಟ : 10 ಶಂಕಿತ ವ್ಯಕ್ತಿಗಳ ವಿಚಾರಣೆ
ನವದೆಹಲಿ, ಸೆ. 14 : ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರ ಸಂಜೆ ನಡೆದ ಬಾಂಬ್ ಸ್ಫೋಟಕ್ಕೆ ತಾನೇ ಹೊಣೆ ಎಂದು ಇಂಡಿಯನ್ ಮುಜಾಹಿದೀನ್ ಸಂಘಟನೆ ಈ ಮೇಲ್ ರವಾನಿಸಿದ ಬೆನ್ನಲ್ಲೇ ಸ್ಫೋಟದಲ್ಲಿ ಕೈವಾಡವಿದೆ ಎನ್ನಲಾದ 10 ಶಂಕಿತ ವ್ಯಕ್ತಿಗಳನ್ನು ಬಂಧಿಸಿ, ಪೊಲೀಸರು ವಿಚಾರಣೆ ಒಳಪಡಿಸಿದ್ದಾರೆ.
ಅಲ್ಲದೆ, ಉಗ್ರರು ಮಾಧ್ಯಮಕ್ಕೆ ರವಾನಿಸಿರುವ ಈಮೇಲ್ ಮುಂಬೈನ ಚೆಂಬೂರ್ ಪ್ರದೇಶದಿಂದ ಬಂದಿದೆ ಎನ್ನುವ ಮಹತ್ವದ ವಿಷಯವನ್ನು ಮುಂಬೈ ಪೊಲೀಸರು ಬೆಳಕಿಗೆ ತಂದಿದ್ದಾರೆ.ಅಹಮದಾಬಾದ್ ಸ್ಫೋಟಗಳು ಬಳಿಕ ಸಿಮಿ ಉಗ್ರನೊಬ್ಬ ಗುಜರಾತಿನ ಸಮಬರಮತಿ ಜೈಲಿನಿಂದ ಪಾಕಿಸ್ತಾನಕ್ಕೆ ದೂರವಾಣಿ ಕರೆ ಮಾಡಿ ಆಪರೇಶನ್ ಬ್ಯಾಡ್ ಯಶಸ್ವಿಯಾಗಿದೆ ಎಂದು ತಿಳಿಸಿರುವ ಸಂಗತಿ ಬೆಳಕಿಗೆ ಬಂದಿದೆ. 'ಬ್ಯಾಡ್ '(BAD)ಎಂದರೆ ಬೆಂಗಳೂರು, ಅಹಮದಾಬಾದ್ , ದಿಲ್ಲಿ ಎನ್ನಲಾಗಿದೆ
ತೀವ್ರ ತನಿಖೆ ನಡೆಸಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ವ್ಯಾಪಕ ಜಾಲ ಬೀಸಿದ್ದಾರೆ. ಇಂದು ಗಣೇಶ ವಿಸರ್ಜನೆ ಕಾರ್ಯಕ್ರಮವಿರುವ ಹಿನ್ನೆಲೆಯಲ್ಲಿ ಮುಂಬೈಯಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಬೆಂಗಳೂರು, ಅಹಮದಾಬಾದ್, ಚೆನ್ನೈ, ಹೈದರಾಬಾದ್, ಕೊಲ್ಕತ್ತಾ ಸೇರಿದಂತೆ ದೊಡ್ಡ ನಗರಗಳಲ್ಲಿ ಭಾರಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣದಲ್ಲಿ ತಪಾಸಣೆ ಕಾರ್ಯ ನಡೆದಿದೆ.
ಈ ಮಧ್ಯೆ ದಿಲ್ಲಿ ಘಟನೆಯನ್ನು ಖಂಡಿಸಿರುವ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಇಂದು ಗೃಹ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆಯನ್ನು ನಡೆಸಿದ್ದಾರೆ. ಉಗ್ರರ ದೃಷ್ಕೃತ್ಯಕ್ಕೆ ಸೋನಿಯಾಗಾಂಧಿ, ಪ್ರಧಾನಮಂತ್ರಿ ಮನಮೋಹನ್ ಸಿಂಗ್, ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ತೀವ್ರವಾಗಿ ಖಂಡಿಸಿದ್ದಾರೆ.
ದಿಲ್ಲಿ ಸರಣಿ ಸ್ಫೋಟ: ಶನಿವಾರ ಸಂಜೆ 6:15 ರ ಸುಮಾರಿಗೆ ಕರೋಲ್ ಬಾಗ್ ನ ಗಫಾರ್ ಮಾರುಕಟ್ಟೆ, 6:30 ಕ್ಕೆ ಕನ್ನಾಟ್ ಪ್ಲೇಸ್, 6:31 ಕ್ಕೆ ಸೆಂಟ್ರಲ್ ಪಾರ್ಕ್ ನ ಮೆಟ್ರೋ ಸ್ಟೇಷನ್ ನಲ್ಲಿ , 6:31 ಕ್ಕೆ ಎಂ-ಬ್ಲಾಕ್ ಮಾರ್ಕೆಟ್, 6:38 ಕ್ಕೆ ಪ್ರಿನ್ಸ್ ಪಾನ್ ಕಾರ್ನರ್ ನಲ್ಲಿ ಸ್ಫೋಟಗೊಂಡಿತ್ತು. 5 ಕಡೆ ಸ್ಫೋಟದಲ್ಲಿ 30 ಕ್ಕೂ ಅಧಿಕ ಮಂದಿ ಮೃತಪಟ್ಟು, 150 ಕ್ಕೂ ಅಧಿಕ ಮಂದಿ ಗಾಯಗೊಂಡ ದಾರುಣ ಘಟನೆ ಜರುಗಿತ್ತು.
(ದಟ್ಸ್ ಕನ್ನಡ ವಾರ್ತೆ)
ರಾಷ್ಟ್ರರಾಜಧಾನಿಯನ್ನು ತಲ್ಲಣಿಸಿದ ಸರಣಿ ಸ್ಫೋಟ


Click it and Unblock the Notifications
