ಪಾಕ್ ಅಧ್ಯಕ್ಷರಾಗಿ ಜರ್ದಾರಿ ಪ್ರಮಾಣ ವಚನ
ಇಸ್ಲಾಮಾಬಾದ್, ಸೆ. 9 : ಪಾಕಿಸ್ತಾನದ ನೂತನ ಅಧ್ಯಕ್ಷರಾಗಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಕೋ- ಚೇರಮನ್ ಆಸೀಫ್ ಅಲಿ ಜರ್ದಾರಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ದರ್ಬಾರ್ ಭವನದಲ್ಲಿ ಏರ್ಪಡಿಸಲಾಗಿದ್ದ ಸರಳ ಸಮಾರಂಭದಲ್ಲಿ ಸುಪ್ರಿಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಅಬ್ದುಲ್ ಹಮೀದ್ ದೊಗ್ಗರ್ ಅವರು ಜರ್ದಾರಿ ಅವರಿಗೆ ಪ್ರಮಾಣ ವಚನದ ಗೌಫ್ಯತೆಯನ್ನು ಬೋಧಿಸಿದರು.
ಕಳೆದ ಶನಿವಾರ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆಸೀಫ್ ಅಲಿ ಜರ್ದಾರಿ 481 ಮತಗಳನ್ನು ಪ್ರಚಂಡ ಬಹುಮತದಿಂದ ಆರಿಸಿ ಬಂದಿದ್ದರು. ಜರ್ದಾರಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಅವರ ಇಬ್ಬರು ಪುತ್ರಿಯರು ಸೇರಿದಂತೆ ಅಪಘಾನಿಸ್ತಾನದ ಅಧ್ಯಕ್ಷ ಹಮೀದ್ ಖರ್ಜಾಯಿ ಹಾಜರಿದ್ದುದ್ದು ವಿಶೇಷವಾಗಿತ್ತು. ಪಿಪಿಪಿ ಪಕ್ಷದ ಹಿರಿಯ ಮುಖಂಡರು, ಅಧಿಕಾರಿಗಳು, ಸೇನಾಡಳಿತದ ಮುಖ್ಯಸ್ಥರು, ಸಚಿವರು, ಪ್ರತಿ ಪಕ್ಷದ ನಾಯಕರು, ಪಿಪಿಪಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಬೆನೆಜೀರ್ ಭುಟ್ಟೋಗೆ ಜಯವಾಗಲಿ, ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎನ್ನುವ ಘೋಷಣೆ ಕೇಳಿಬಂದವು.
ಕಳೆದ ವರ್ಷ ಡಿಸೆಂಬರ್ ತಿಂಗಳ ಕೊನೆಯಲ್ಲಿ ಚುನಾವಣಾ ಪ್ರಚಾರ ಕೈಗೊಂಡ ಸಂದರ್ಭದಲ್ಲಿ ಮಾಜಿ ಪ್ರಧಾನಿ ಬೆನೆಜೀರ್ ಭುಟ್ಟೋ ಅವರನ್ನು ಹತ್ಯೆ ಮಾಡಲಾಗಿತ್ತು. ಅನುಕಂಪದ ಅಲೆಯ ಜೊತೆಗೆ ಮುಷರಫ್ ಅವರ ಸರ್ವಾಧಿಕಾರಿ ಧೋರಣೆಗೆ ಬೇಸತ್ತಿದ್ದ ಪಾಕ್ ಜನತೆ ಫೆ.18 ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪಿಪಿಪಿ ಪಕ್ಷ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಆಗ ಪಿಪಿಪಿ ಮುಖಂಡ ಯಾಸೆಫ್ ರಜಾ ಗಿಲಾನಿ ಪ್ರಧಾನಮಂತ್ರಿಯಾದರು. ಮುಷರಫ್ ಅವರನ್ನು ಒತ್ತಾಯದ ಮೂಲಕ ರಾಜೀನಾಮೆ ಪಡೆಯಲಾಯಿತು. ಖಾಲಿಯಾಗಿದ್ದ ಸ್ಥಾನಕ್ಕೆ ಕಳೆದ ಶನಿವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜರ್ದಾರಿ ಅತ್ಯಧಿಕ ಮತ ಪಡೆದು ಆಯ್ಕೆಯಾಗಿದ್ದರು.
(ದಟ್ಸ್ ಕನ್ನಡ ವಾರ್ತೆ)
ಜರ್ದಾರಿ ಪಾಕಿಸ್ತಾನದ ನೂತನ ಅಧ್ಯಕ್ಷ
ಪಾಕ್ ಪ್ರಧಾನಿ ಯೂಸಫ್ ಗಿಲಾನಿ ಹತ್ಯೆ ಯತ್ನ ವಿಫಲ


Click it and Unblock the Notifications
