ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸೌಧದಲ್ಲಿ ಬಿಎಸ್ ವೈ ಬಿಚ್ಚಿಟ್ಟ ಕನಸುಗಳು

By Staff
|
Google Oneindia Kannada News

ವಿಧಾನಸೌಧ (ಬ್ಯಾಂಕ್ವೆಟ್ ಹಾಲ್ ಸಭಾಂಗಣ), ಸೆ. 9 : ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗಲೇಬೇಕು, ಅದು ಕನ್ನಡಿಗರ ಜನ್ಮ ಸಿದ್ಧ ಹಕ್ಕು. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಹಿಂದೇಟು ಹಾಕಿದರೆ ಮುಖ್ಯಮಂತ್ರಿ ಎನ್ನುವುದನ್ನು ಲೆಕ್ಕಿಸದೇ ರಾಜ್ಯಾದ್ಯಂತ ಜನಾಂದೋಲನ ನಡೆಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಶತದಿನೋತ್ಸವದ ಭವ್ಯ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ. ಕೇಂದ್ರ ಸರ್ಕಾರ ಕೂಡಲೇ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಜನರ ಆಶೀರ್ವಾದದಿಂದ ದಕ್ಷಿಣ ಭಾರತದಲ್ಲಿ ಬಿಜೆಪಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಿತು. 100 ದಿನಗಳ ಸರ್ಕಾರದ ಆಡಳಿತಾವಧಿಯಲ್ಲಿ ಅನೇಕ ಜನಪರ ಘೋಷಣೆಗಳನ್ನು ಮಾಡಲಾಗಿದೆ. ಶೇ. 90 ರಷ್ಟು ಯೋಜನೆಗಳಿಗೆ ಸರ್ಕಾರಿ ಆಜ್ಞೆ ಈಗಾಗಲೇ ಹೊರಬಿದ್ದಿದೆ ಎಂದು ಹೇಳಿದರು.

ಗಣಿ ಅವ್ಯವಹಾರ ತನಿಖೆ
'ಶತದಿನ'ದ ಆಚರಣೆಯಲ್ಲಿ ಸರ್ಕಾರ ಅನೇಕ ತೀರ್ಮಾನಗಳನ್ನು ಕೈಗೊಂಡಿದ್ದು, ಮುಖ್ಯವಾಗಿ ನನ್ನ ಆಡಳಿತದ ಅಧಿಕಾರವಾದಿಯಲ್ಲಿ ಇಂದಿನವರೆಗೂ ಗಣಿಗಾರಿಕೆಯಲ್ಲಿ ನಡೆದಿರುವ ಅವ್ಯವಹಾರದ ಸಮಗ್ರ ತನಿಖೆ ನಡೆಸಲು ಲೋಕಾಯುಕ್ತರಿಗೆ ಸಂಪೂರ್ಣ ಅಧಿಕಾರ ನೀಡಲು ಸರ್ಕಾರ ನಿರ್ಧರಿಸಿದೆ. ರಾಜ್ಯದ ಸಂಪತ್ತು ನಾಶ ಮಾಡಲು ಬಿಜೆಪಿ ಸರ್ಕಾರ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯಾ ಕ್ರಮಕೈಗೊಳ್ಳಲಾಗುವುದು ಎಂದರು. ಈ ವಿಷಯದಲ್ಲಿ ಯಾರಿಗೂ ಅನುಮಾನಬೇಡ, ರಾಜ್ಯದ ಸಂಪತ್ತು ರಾಜ್ಯದಲ್ಲಿ ಮಾತ್ರ ವಿನಿಯೋಗವಾಗಬೇಕು ಎಂದು ಯಡಿಯೂರಪ್ಪ ಘಂಟಾಘೋಷವಾಗಿ ಹೇಳಿದರು.

ಗ್ರಾಮೀಣ ರಸ್ತೆಗಳಿಗೆ ಮೋಕ್ಷ
ಸರ್ಕಾರಿ ಕಾಮಗಾರಿಗಳ ಬಗ್ಗೆ ಅನೇಕ ವರ್ಷಗಳಿಂದ ನೂರಾರು ದೂರುಗಳಿವೆ. ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಲು ಸಾಧ್ಯವಾಗದಿದ್ದರೂ ಕನಿಷ್ಠ ನನ್ನ ಆಡಳಿತದ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ಮಾಡಲು ನಾವು ನಿರ್ಧರಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಕಾಮಗಾರಿಗಳ ಉಸ್ತುವಾರಿಗೆ ರಾಷ್ಟ್ರಮಟ್ಟದ ತಜ್ಞರ ಸಮಿತಿಯೊಂದನ್ನು ರಚಿಸಲಾಗುವುದು ಎಂದರು. ನಂಜುಂಡಪ್ಪ ವರದಿಯ ಕಾಮಗಾರಿಗಳನ್ನು ಚುರುಕುಗೊಳಿಸಲಾಗುವುದು ಎಂದ ಅವರು, ಈ ಯೋಜನೆಳಿಗೆ ಸಾಕಷ್ಟು ಸಂಪನ್ಮೂಲಗಳನ್ನು ನೀಡಲಾಗುವುದು ಎಂದರು. ರಾಜ್ಯ ಗ್ರಾಮೀಣ ಪ್ರದೇಶಗಳ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಅವುಗಳ ಅಭಿವೃದ್ಧಿಗೆ ವಿಶೇಷ ಆಧ್ಯತೆ ನೀಡಲಾಗುವುದು ಎಂದು ಹೇಳಿದರು.

ಕೈಗಾರಿಕೆಗೆ ಉತ್ತೇಜನ
ಬೆಂಗಳೂರಿನ ಮೂಲಭೂತ ಸಮಸ್ಯೆಗಳು ಸೇರಿದಂತೆ ಸಮಗ್ರ ಅಬಿವೃದ್ಧಿಗೆ ವಿಶೇಷ ತಜ್ಞರ ಸಮಿತಿಯೊಂದನ್ನು ರಚಿಸಲಾಗಿದ್ದು. ಸೆ. 10 ರ ಸಂಜೆ ನೂತನ ಸಮಿತಿಯ ಪ್ರಥಮ ಸಭೆ ನಡೆಸಲಿದೆ. ಇಂದಿನಿಂದ ಬೆಂಗಳೂರಿನ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು. ಹಾಗೆಯೇ ಕೈಗಾರಿಕೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಬಂಡವಾಳ ಹೂಡಿಕೆದಾರರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಲಿದೆ. ಇತ್ತೀಚೆಗೆ ಅಮೆರಿಕ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಕೆಲ ಹೂಡಿಕೆದಾರರಿಂದ ಭರವಸೆ ಸಿಕ್ಕಿದೆ. ಕೈಗಾರಿಕೆ ರಂಗಕ್ಕೆ ಅಗತ್ಯ ಉತ್ತೇಜನ ನೀಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.

17 ಲಕ್ಷ ರೈತರಿಗೆ ಉಚಿತ ವಿದ್ಯುತ್
ಭಯೋತ್ಪಾದನೆ ಹತ್ತಿಕ್ಕಲು ಕಾಳಜಿ ವಹಿಸಲಾಗಿದ್ದು, ಪೊಲೀಸ್ ಇಲಾಖೆಗೆ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಸಿದ್ಧವಿದೆ. ಪ್ರವಾಸೋದ್ಯಮಕ್ಕೆ ಸರ್ಕಾರ ವಿಶೇಷ ಒತ್ತು ನೀಡಿದೆ. ಹಾಲು ಉತ್ಪಾದನೆಗೆ ಗಮನ ಹರಿಸಲಾಗಿದ್ದು, ಪ್ರತಿ ಲೀಟರ್ ಗೆ ಹೆಚ್ಚುವರಿಯಾಗಿ ಎರಡು ರುಪಾಯಿ ನೀಡಲಾಗುವುದು ಎಂದು ಹೇಳಿದರು.
ರಾಜ್ಯದ 17 ಲಕ್ಷ ರೈತರಿಗೆ ಉಚಿತ ವಿದ್ಯುತ್, ಶೇ. 3ರ ಬಡ್ಡಿದರದಲ್ಲಿ ಸಾಲ ನೀಡುವುದು ದೇಶದಲ್ಲಿಯೇ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಮಾಡಿದೆ ಎಂದು ಸಮರ್ಥಿಸಿಕೊಂಡರು.

ನೂರು ದಿನದ ಆಡಳಿತ ಅವಧಿಯಲ್ಲಿ ಪ್ರತಿಪಕ್ಷದ ಮುಖಂಡರಿಂದ ಸಹಕಾರ ದೊರೆತಿಲ್ಲ ಎಂದು ದೂರಿದ ಅವರು, ರಾಜಕೀಯ ವೈಷಮ್ಯೆ ಮರೆತು ಉತ್ತಮ ಆಡಳಿತ ನೀಡಲು ವಿಪಕ್ಷ ನಾಯಕರು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು. ಸರ್ಕಾರದ ನೂರು ದಿನದ ಸಾಧನೆಯ ಕಿರುಹೊತ್ತಿಗೆ, ಹಾಗೂ ಸಿಡಿಗಳನ್ನು ಈ ಸಂದರ್ಭದಲ್ಲಿ ಯಡಿಯೂರಪ್ಪ ಬಿಡುಗಡೆ ಮಾಡಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X