ಥಾಮಸ್ ಕುಟುಂಬಕ್ಕೆ ಬಿಎಸ್ವೈ ಸಹಾಯದ ಭರವಸೆ
ಬೆಂಗಳೂರು, ಆ. 25 : ಕಾಶ್ಮೀರದ ಕುಪ್ವಾರಾದಲ್ಲಿ ಪಾಕ್ ಉಗ್ರರ ವಿರುದ್ಧ ಹೋರಾಡುತ್ತ ಪ್ರಾಣತ್ಯಾಗ ಮಾಡಿದ ವೀರಯೋಧ ಕರ್ನಲ್ ಥಾಮಸ್ ಅವರ ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕರ್ನಲ್ ಕುಟುಂಬಕ್ಕೆ ಸಾಂತ್ವನ ಹೇಳಿ ಥಾಮಸ್ ಅವರ ಮಕ್ಕಳ ವಿದ್ಯಾಭ್ಯಾಸದ ವೆಚ್ಚ ಸರ್ಕಾರ ಭರಿಸುವ ಭರವಸೆಯನ್ನು ನೀಡಿದ್ದಾರೆ.
ವೀರಯೋಧನ ಹೆಂಡತಿ ಬೀನಾ ಅವರೊಂದಿಗೆ ಮಾತನಾಡುತ್ತಿದ್ದ ಯಡಿಯೂರಪ್ಪ ಸರ್ಕಾರ ಯಾವುದೇ ರೀತಿಯ ಸಹಾಯ ನೀಡಲು ಸಿದ್ಧವಿದೆ ಎಂದು ನುಡಿದು ಮಾನವೀಯತೆಯನ್ನು ಮೆರೆದಿದ್ದಾರೆ. ಈ ಹಿಂದೆ ದೇಶಕ್ಕಾಗಿ ಹೋರಾಡಿ ಮಡಿದ ಕುಟುಂಬಕ್ಕೆ ಮುಖ್ಯಮಂತ್ರಿಯೊಬ್ಬರು ಖುದ್ದು ಭೇಟಿ ನೀಡಿದ ಯಾವುದೇ ದಾಖಲೆಗಳಿಲ್ಲ.
ನಂತರ ಸುದ್ದಿಗಾರರೊಡನೆ ಮಾತನಾಡುತ್ತಿದ್ದ ಮುಖ್ಯಮಂತ್ರಿ, ಥಾಮಸ್ ಅವರು ವೀರಾವೇಶದ ಹೋರಾಟದಿಂದ ವೀರರಿಗೆ ಮಾದರಿಯಾಗಿದ್ದಾರೆ. ಇಡೀ ರಾಷ್ಟ್ರ ಅವರಿಗೆ ಋಣಿಯಾಗಿದೆ ಎಂದು ಭಾವುಕರಾಗಿ ಹೇಳಿದರು.
ದೇಶಕ್ಕಾಗಿ ಪ್ರಾಣತೆತ್ತ ವೀರಯೋಧ ಕೇರಳ ಮೂಲದ ಕರ್ನಲ್ ಥಾಮಸ್ (43) ಅವರ ಅಂತ್ಯಕ್ರಿಯೆಯನ್ನು ಇಂದು ಸಕಲ ಮಿಲಿಟರಿ ಗೌರವದೊಂದಿಗೆ ದೊಮ್ಮಲೂರಿನ ಚರ್ಚ್ನಲ್ಲಿ ನೆರವೇರಿಸಲಾಯಿತು. ಮೂರು ವರ್ಷಗಳಿಂದ ಕರ್ನಲ್ ಕುಟುಂಬ ಬೆಂಗಳೂರಿನಲ್ಲಿ ನೆಲೆಸುತ್ತಿತ್ತು. 45ನೇ ರಾಷ್ಟ್ರೀಯ ರೈಫಲ್ಸ್ನ ಮುಖ್ಯಸ್ಥರಾಗಿದ್ದ ಥಾಮಸ್ ಶುಕ್ರವಾರ, ಉಗ್ರರನ್ನು ಸದೆಬಡಿಯುತ್ತಲೇ ಗಾಯಗೊಂಡು ಹುತಾತ್ಮರಾದರು.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ
ವೀರಯೋಧ ಕರ್ನಲ್ ಥಾಮಸ್ ಗೆ ಅಂತಿಮ ನಮನ


Click it and Unblock the Notifications
