ಸೋರೆನ್ ಸಿಎಂ ಆಗಿ ಪ್ರಮಾಣ ವಚನ ಸಾಧ್ಯತೆ
ರಾಂಚಿ, ಆ. 25 : ಜಾರ್ಖಂಡ್ ನ ನೂತನ ಮುಖ್ಯಮಂತ್ರಿಯಾಗಿ ಜಾರ್ಖಂಡ್ ಮುಕ್ತಿ ಮೊರ್ಚಾ ನಾಯಕ ಶಿಬು ಸೋರೆನ್ ಇಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ. ಸರ್ಕಾರ ರಚಿಸಲು ಆಹ್ವಾನಿಸುವಂತೆ ರಾಜ್ಯಪಾಲ ಸಯ್ಯದ್ ಶಿಬ್ತೆ ರಜಿ ಅವರಲ್ಲಿ ಸೋರೆನ್ ಮನವಿ ಮಾಡಿಕೊಂಡಿದ್ದಾರೆ. ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಮಧು ಕೊಡಾ ಹಾಗೂ ಏಳು ಮಂದಿ ಪಕ್ಷೇತರ ಶಾಸಕರು ಶಿಬು ಸೋರೆನ್ ಸರ್ಕಾರಕ್ಕೆ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತೀವ್ರ ನಾಟಕೀಯ ಬೆಳವಣಿಗೆ ನಡುವೆ ಶಿಬು ಸೋರೆನ್ ಮುಖ್ಯಮಂತ್ರಿ ಸ್ಥಾನಕ್ಕೆ ಹತ್ತಿರಕ್ಕೆ ಬಂದು ನಿಂತಿದ್ದರೂ ಶಾಸಕರ ಸಂಖ್ಯೆ ಅವರನ್ನು ಕಾಡತೊಡಗಿದೆ. ಒಂದೊಂದು ಮತಗಳು ಭಾರಿ ಮಹತ್ವದ ಪಡೆದಿರುವ ಹಿನ್ನೆಲೆಯಲ್ಲಿ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು ಶಿಬು ಸೋರೆನ್ ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ. ಇದರಿಂದ ಸೋರೆನ್ ನೆಮ್ಮದಿಯ ನಿಟ್ಟುರಿಸುಬಿಡುವಂತಾಗಿದೆ.
ಜಾರ್ಖಂಡ್ ವಿಧಾನಸಭೆ 81 ಶಾಸಕರ ಸಂಖ್ಯಾಬಲ ಹೊಂದಿದ್ದು, ಅದರಲ್ಲಿ ಸರ್ಕಾರ ರಚಿಸಲು 41 ಶಾಸಕರ ಅವಶ್ಯಕತೆ ಇದೆ. ಜೆಎಂಎಂನ 17, ಆರ್ ಜೆಡಿ 1, ಎನ್ ಸಿಪಿ 1, ಕಾಂಗ್ರೆಸ್ 15 ಹಾಗೂ ನಾಲ್ಕು ಮಂದಿ ಪಕ್ಷೇತರ ಶಾಸಕರು ಈಗಾಗಲೇ ಸೋರೆನ್ ಸರ್ಕಾರ ರಚಿಸಲು ಬೆಂಬಲ ಸೂಚಿಸಿದ್ದಾರೆ. ಆದರೆ ಸಂಖ್ಯೆ ಶಾಸ್ತ್ರದ ದೃಷ್ಟಿಯಲ್ಲಿ ಸೊರೆನ್ ಸರ್ಕಾರಕ್ಕೆ ಇನ್ನು ಮೂರು ಶಾಸಕರು ಬೇಕಾಗಿದ್ದಾರೆ. ಬೆಂಬಲ ನೀಡಲು ನಿರಾಕರಿಸಿರುವ ಏಳು ಮಂದಿ ಪಕ್ಷೇತರರಲ್ಲಿ ಮೂವರನ್ನು ಸೆಳೆಯುವ ತಂತ್ರಗಾರಿಕೆಯಲ್ಲಿ ಶಿಬು ಸೋರೆನ್ ಬೆಂಬಲಿಗರು ನಿರತರಾಗಿದ್ದಾರೆ.
ಮಧು ಕೊಡಾ ಜೆಎಂಎಂ ಬೆಂಬಲ ಹಿಂದಕ್ಕೆ ಪಡೆದ ಹಿನ್ನೆಲೆಯಲ್ಲಿ ಆ. 25ರಂದು ಬಹುಮತ ಸಾಬೀತುಪಡಿಸುವುದಾಗಿ ರಾಜ್ಯಪಾಲರಿಗೆ ತಿಳಿಸಿದ್ದರು. ಆದರೆ ಅಗತ್ಯ ಸಂಖ್ಯೆಗಳ ಕೊರತೆಯ ಎದುರಾಗಿದ್ದರಿಂದ ತಮ್ಮ ಸ್ಥಾನ ಶನಿವಾರ ರಾಜೀನಾಮೆ ನೀಡಿದ್ದರು.
(ದಟ್ಸ್ ಕನ್ನಡ ವಾರ್ತೆ)
ಜಾರ್ಖಂಡ್ ಸಿಎಂ ಆಗಿ ಶಿಬು ಸೋರೆನ್?


Click it and Unblock the Notifications
