ಇಂದು ಬೆಳ್ಳುಬ್ಬಿ ರಾಜೀನಾಮೆ, ಉಮೇಶ್ ಕತ್ತಿಗೆ ಸ್ಥಾನ

ಇತ್ತೀಚೆಗಷ್ಟೇ ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸೇರಿರುವ ಉಮೇಶ್ ಕತ್ತಿ ಸಲುವಾಗಿಯೇ ಈ ಬದಲಾವಣೆ ಮಾಡುತ್ತಿದ್ದು, ಬಿಜೆಪಿ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ನಡುವೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳ್ಳುಬ್ಬಿ ಅವರನ್ನು ಮಾತ್ರ ಸಂಪುಟದಿಂದ ಕೈಬಿಡುವುದಾಗಿ ಮೂದಲ ಬಾರಿಗೆ ಹೇಳಿಕೆ ನೀಡಿದರು. ಈ ಮೂಲಕ ಇದುವರೆಗೂ ಇದ್ದ ಗೊಂದಲಕ್ಕೆ ತೆರೆಬಿದ್ದಿದ್ದು, ಬೆಳ್ಳುಬ್ಬಿ ಸಂಪುಟದಿಂದ ಹೊರಹೋಗುವುದು ಖಚಿತವಾಗಿದೆ. ಅಷ್ಟೇ ಅಲ್ಲದೆ, ಸದ್ಯಕ್ಕೆ ಬೇರೆ ಯಾವ ಸಚಿವರನ್ನು ಬದಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ಈ ನಡುವೆ ಕಾಂಗ್ರೆಸ್ ನ ವಿ. ಸೋಮಣ್ಣ ಮತ್ತು ಗುರುಪಾದಪ್ಪ ನಾಗಮಾರಪಳ್ಳಿ ಅವರೂ ಸಂಪುಟಕ್ಕೆ ಸೇರಿಸಿಕೊಳ್ಳುವುದು ಖಚಿತ ಎಂದಾದಲ್ಲಿ ಅವರಿಬ್ಬರು ಬಿಜೆಪಿ ಸೇರುವುದು ನಿಶ್ಚಿತ ಎನ್ನಲಾಗಿದೆ. ಹಾಗೆಯೇ ಜಗಳೂರು ಕಾಂಗ್ರೆಸ್ ಶಾಸಕ ರಾಮಚಂದ್ರ, ಗುರುಮಿಠಕಲ್ ನ ಕಾಂಗ್ರೆಸ್ ಶಾಸಕ ಬಾಬುರಾವ್ ಚಿಂಚನಸೂರ್ ಕೂಡ ಬಿಜೆಪಿ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ. ಅದರೆ ಅವರಿಬ್ಬರು ಸಚಿವ ಸ್ಥಾನದ ಆಕಾಂಕ್ಷೆ ಹೊಂದಿಲ್ಲ ಎನ್ನಲಾಗಿದೆ. ಹಳಿಯಾಳದ ಸುನೀಲ್ ಹೆಗಡೆ ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆ. ಆದರೆ ಬಿಜೆಪಿ ವಲಯದಲ್ಲಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಆಪರೇಷನ್ ಕಮಲದ ಮೂಲಕ ಮೂಲಕ ಇದುವರೆಗೂ ಏಳು ಮಂದಿ ಕಾಂಗ್ರೆಸ್ ಜೆಡಿಎಸ್ ಶಾಸಕರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಬಿಜೆಪಿ ಇನ್ನೂ 3-4 ಮಂದಿಯನ್ನು ಸೆಳೆಯಲು ಪ್ರಯತ್ನ ಮುಂದುವರೆಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications