ತೋಟಗಾರಿಕೆ ಸಚಿವ ಬೆಳ್ಳುಬ್ಬಿ ತಲೆದಂಡ ಖಚಿತ ?
ಬೆಂಗಳೂರು, ಆ. 21, : ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವ ಅನ್ಯ ಪಕ್ಷಗಳ ಶಾಸಕರಿಗೆ ಪುನರ್ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಭಾರತೀಯ ಪಕ್ಷದಲ್ಲಿ ಭಾರಿ ಕಾರ್ಯಚರಣೆ ಆರಂಭವಾಗತೊಡಗಿದೆ. ಇತ್ತೀಚೆಗೆ ಪಕ್ಷ ಸೇರಿರುವ ಜೆಡಿಎಸ್ ಶಾಸಕ ಉಮೇಶ ಕತ್ತಿ ಅವರಿಗೆ ಸಚಿವರ ಸ್ಥಾನ ನೀಡಲು ಯಡಿಯೂರಪ್ಪ ಮುಂದಾಗಿದ್ದು, ತೋಟಗಾರಿಕೆ ಮಂತ್ರಿ ಎಸ್.ಕೆ.ಬೆಳ್ಳುಬ್ಬಿ ಅವರ ತಲೆ ದಂಡ ಖಚಿತ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದ ನಂತರ 'ಆಪರೇಶನ್ ಕಮಲ 'ಎಂಬ ಹೆಸರಿನಡಿಯಲ್ಲಿ ಅನ್ಯ ಪಕ್ಷಗಳ ಶಾಸಕರನ್ನು ಸೆಳೆಯುವ ಕೆಲಸದಲ್ಲಿ ನಿರತವಾಗಿರುವ ಆಡಳಿತ ಪಕ್ಷ, ಕಾಂಗ್ರೆಸ್ ಮತ್ತು ಜೆಡಿಎಸ್ ಅನೇಕ ಶಾಸಕರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಬೇರೆ ಪಕ್ಷಗಳಿಂದ ವಲಸೆ ಬರುವ ಶಾಸಕರಿಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಿಕೊಡಲಾಗುವುದು ಎಂದು ಹೇಳಿಕೆ ನೀಡಿರುವ ಯಡಿಯೂರಪ್ಪ, ತಮ್ಮ ಮಂತ್ರಿ ಮಂಡಲದ ಕೆಲ ಸಚಿವರಿಗೆ ಕೊಕ್ ನೀಡಿ ಪಕ್ಷಾಂತರಿಗಳಿಗೆ ಮಣಿ ಹಾಕತೊಗಿದ್ದಾರೆ. ಪುನರ್ ವಸತಿ ಖಚಿತಪಡಿಸಿಕೊಂಡು ಅನ್ಯ ಪಕ್ಷಗಳ ಶಾಸಕರು ಒಬ್ಬೊರಂತೆ ಕಮಲದ ತೆಕ್ಕೆಗೆ ಬೀಳತೊಡಗಿದ್ದಾರೆ. ನಿಗಮ ಮಂಡಳಿಯಲ್ಲಿ ಪಕ್ಷಾಂತರಿಗಳು ಸ್ಥಾನವನ್ನು ಪಡೆಯತೊಡಗಿದ್ದಾರೆ. ಕೃಷ್ಣಯ್ಯ ಶೆಟ್ಟಿ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಗಳಿವೆ.
ಇದೇ 27 ಇಲ್ಲವೇ ಮುಂದಿನ ತಿಂಗಳು 4 ರಂದು ಸಂಪುಟ ವಿಸ್ತರಣೆ ಮಾಡುವ ಸಂಭವವಿದೆ. ತೋಟಗಾರಿಕೆ ಸಚಿವರಾಗಿರುವ ಬೆಳ್ಳುಬ್ಬಿ ಅವರನ್ನು ಯಾವುದಾದರೂ ನಿಗಮ ಮಂಡಳಿಗೆ ನೇಮಿಸುವ ಸಾಧ್ಯತೆಗಳಿವೆ. ಆದರೆ ಮುಖ್ಯಮಂತ್ರಿಯವರು ಅಮೆರಿಕದಲ್ಲಿ ನಡೆಯುವ ಅಕ್ಕ ಸಮ್ಮೇಳನಕ್ಕೆ ತೆರಳುವವರಿಂದ ಸಂಪುಟ ಪುನರಚನೆ ಕೆಲ ದಿವಸಗಳ ಮಟ್ಟಿಗೆ ವಿಳಂಬವಾಗುವ ಸಾಧ್ಯತೆಗಳಿವೆ. ಈ ಮಧ್ಯೆ ಬೆಳ್ಳುಬ್ಬಿ ರಾಜೀನಾಮೆ ನೀಡುವ ವಿಷಯ ತಿಳಿಯುತ್ತಿದ್ದಂತೆಯೇ ಅವರ ಸ್ವಕ್ಷೇತ್ರ ನಾಗಠಾಣದಲ್ಲಿ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದಾರೆ. ಬಿಜಾಪುರದಲ್ಲಿ ಪ್ರತಿಭಟನೆ ಶುರುವಾಗಿದೆ. ಇಂದು ಬಸವನ ಬಾಗೇವಾಡಿಯಲ್ಲೂ ಬೆಳ್ಳುಬ್ಬಿ ರಾಜೀನಾಮೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿ ಮುಷ್ಕರ ಆರಂಭವಾಗಿವೆ.
(ದಟ್ಸ್ ಕನ್ನಡ ವಾರ್ತೆ)
ಆಪರೇಶನ್ ಕಮಲಕ್ಕೆ ದೇವೇಗೌಡ ತೀವ್ರ ಆಕ್ಷೇಪ


Click it and Unblock the Notifications
