ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡನೇ ದಿನ ಮುಂದುವರೆದ ಸಿದ್ದು ರಹಸ್ಯ ಸಭೆ

By Staff
|
Google Oneindia Kannada News

ಗೋವಾ, ಆ. 21 : ಮಾಜಿ ಉಪಮುಖ್ಯಮಂತ್ರಿ ಸಿದ್ಧರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಕೈಕೊಡುವುದು ಖಚಿತ ಎನ್ನುವ ಸುದ್ದಿ ದಟ್ಟವಾಗಿ ಹಬ್ಬಿದೆ. ಬುಧವಾರ ನಗರದ ಸಿಂಕೇರಿಯಂ ರೆಸಾರ್ಟ್ ನಲ್ಲಿ ಬೆಂಬಲಿಗರ ಜತೆಗೆ ರಹಸ್ಯ ಮಾತುಕತೆ ನಡೆಸಿದ್ದ ಸಿದ್ಧರಾಮಯ್ಯ, ಇಂದು ಮತ್ತೆ ತಮ್ಮ ಮಹತ್ವದ ಸಭೆಯನ್ನು ಮುಂದುವರೆಸಿದ್ದಾರೆ. ಒಂದರ್ಥದಲ್ಲಿ ಸಿದ್ಧರಾಮಯ್ಯ ರಾಜಕೀಯ ಅತಂತ್ರ ಸ್ಥಿತಿಯಲ್ಲಿದ್ದು, ಈ ಚರ್ಚೆಯ ನಂತರ ಮುಂದಿನ ರಾಜಕೀಯ ಹೆಜ್ಜೆಯನ್ನು ಪ್ರಕಟಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ನಿನ್ನೆಯಷ್ಟೇ ಗೋವಾದ ರೆಸಾರ್ಟ್ ವೊಂದರಲ್ಲಿ ರಹಸ್ಯ ಸಭೆ ನಡೆಸುತ್ತಿರುವ ಸಂಗತಿ ಬೆಳಕಿಗೆ ಬಂದಿತ್ತು. ಆದರೆ ಸಿದ್ಧರಾಮಯ್ಯ ಪಕ್ಷದ ಕೆಲಸದ ನಿಮಿತ್ತ ಇಲ್ಲಿಗೆ ಆಗಮಿಸಲಾಗಿದ್ದು, ಪಕ್ಷ ತೊರೆಯುವ ವದಂತಿಯನ್ನು ತಳ್ಳಿ ಹಾಕಿದ್ದರು. ಆದರೆ ಇಂದು ಮತ್ತೆ ಸಭೆ ಮುಂದುವರೆದಿರುವುದು ಅನೇಕ ಉಹಾಪೋಹಗಳಿಗೆ ರೆಕ್ಕೆಪುಕ್ಕ ದೊರತಿವೆ. ಪ್ರತಿಪಕ್ಷ ನಾಯಕರ ಸ್ಥಾನ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವರಿಷ್ಠರ ವಿರುದ್ಧ ಅಸಮಾಧಾನಗೊಂಡಿರುವ ಸಿದ್ಧರಾಮಯ್ಯ ಅವರು ಎಬಿಪಿಜೆಡಿ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಯೋಜನೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಎಬಿಪಿಜೆಡಿ ಬಲಗೊಳಿಸುವುದು ಸೇರಿದಂತೆ ವಿವಿಧ ಪಕ್ಷದಲ್ಲಿರುವ ಸಿದ್ಧರಾಮಯ್ಯ ಬೆಂಬಲಿಗರು ಹಾಗೂ ಬಿಜೆಪಿ ಪಕ್ಷದಲ್ಲಿರುವ ಆತೃಪ್ತಿ ಶಾಸಕರನ್ನು ತನ್ನತ್ತ ಸೆಳೆದುಕೊಂಡು ಆಡಳಿತರೂಢ ಬಿಜೆಪಿ ಸರ್ಕಾರದ ಬುಡಕ್ಕೆ ನೀರು ಬಿಡುವ ಕಾರ್ಯತಂತ್ರವನ್ನು ಹೆಣಿಯುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.

ಗೋವಾದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ, ಕಡೂರು ಕೃಷ್ಣಮೂರ್ತಿ, ಮಾಜಿ ಸಂಸದ ಕೋದಂಡರಾಮಯ್ಯ, ಮಾಜಿ ಸಚಿವರಾದ ಬಿ.ಆರ್.ಪಾಟೀಲ್, ಸತೀಶ್ ಜಾರಕಿಹೊಳಿ, ಡಾ.ಎಚ್.ಸಿ.ಮಹಾದೇವಪ್ಪ, ಮಹದೇವ ಪ್ರಸಾದ್ ಸೇರಿ ಹಲವು ಸಿದ್ಧರಾಮಯ್ಯ ಬೆಂಬಲಿಗರ ಗೋವಾ ರೇಸಾರ್ಟ್ ವೊಂದರಲ್ಲಿ ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಕಾಂಗ್ರೆಸ್ ಪಕ್ಷ ವರಿಷ್ಠರ ಇತ್ತೀಚಿನ ಕೆಲ ನಿರ್ಧಾರಗಳು ಕುರಿತು ಚರ್ಚೆ ನಡೆಸಲಾಗಿದೆ. ಹಾಗೂ ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಪೂರ್ವದಲ್ಲಿ ವರಿಷ್ಠರು ನೀಡಿದ್ದ ಭರವಸೆಯನ್ನು ಉಳಿಸಿಕೊಂಡಿಲ್ಲ ಎಂದು ಹಲವು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ತೊರೆದು ಸಿದ್ಧರಾಮಯ್ಯ ಅವರು ಸ್ಥಾಪಿಸಿರುವ ಎಬಿಪಿಜೆಡಿ ಪಕ್ಷವನ್ನೇ ಬಲಗೊಳಿಸಬೇಕು. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳಲ್ಲಿರುವ ಸಿದ್ಧರಾಮಯ್ಯ ಬೆಂಬಲಿಗರನ್ನು ಎಬಿಪಿಜೆಡಿಗೆ ಸೆಳೆದುಕೊಳ್ಳುವುದು. ಆ ಮೂಲಕ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬಲವಾದ ಟಾಂಗ್ ಕೊಡುವ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಯಿತು. ಇನ್ನೊಂದು ಮೂಲಗಳ ಪ್ರಕಾರ ಎಬಿಪಿಜೆಡಿ ಬಲಗೊಳಿಸಿ ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಯಿತು ಎನ್ನಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ಗೋವಾದಲ್ಲಿ ಬೆಂಬಲಿಗರ ಜತೆ ಸಿದ್ದು ರಹಸ್ಯ ಸಭೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X