ಬೆಳ್ಳುಬ್ಬಿ ಬೆಂಬಲಿಗರಿಂದ ಬಿಜಾಪುರದಲ್ಲಿ ಭಾರೀ ಪ್ರತಿಭಟನೆ
ಬಿಜಾಪುರ, ಆ. 21 : ನಾಗಠಾಣದ ಶಾಸಕ, ತೋಟಗಾರಿಕೆ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರು ರಾಜೀನಾಮೆ ನೀಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರು ಇಂದು ನಗರದ ಗಾಂಧಿ ಚೌಕನಲ್ಲಿ ಭಾರೀ ಪ್ರತಿಭಟನೆ ನಡೆಸಿದರು. ಆಕ್ರೋಶಗೊಂಡ ಕಾರ್ಯಕರ್ತರು ರಾಜ್ಯ ರಸ್ತೆ ಸಾರಿಗೆ ಬಸ್ಸಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿದರು. ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಜಿಲ್ಲಾವರಿಷ್ಠಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೂ ಮುಂಚೆ ಪ್ರತಿಭಟನಾಕಾರರು ಪಿಎಸ್ ಐ ಒಬ್ಬರ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಕೈಮೀರಿದ್ದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಸಚಿವರ ಜತೆಗೆ ಚರ್ಚೆ ನಡೆಸಲಾಗಿದ್ದು, ರಾಜೀನಾಮೆಯಿಂದ ಕಾರ್ಯಕರ್ತರು ಉದ್ವೇಗಕ್ಕೆ ಒಳಗಾವುದು ಬೇಡ ಎಂದು ಬೆಳ್ಳುಬ್ಬಿಯವರು ಮನವಿ ಮಾಡಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರಿಗೆ ತಿಳಿಸಿದರು.
ಪಕ್ಷಾಂತರಿಗಳಿಗೆ ಮಣೆ ಹಾಕಿರುವ ಬಿಜೆಪಿ ವರಿಷ್ಠರು ಮೂಲ ಬಿಜೆಪಿ ಶಾಸಕರನ್ನು ನಿರ್ಲಕ್ಷಿಸಿದ್ದಾರೆ ಹಾಗೂ ಸಂಪುಟದಲ್ಲಿರುವ ಕೆಲ ಕಟ್ಟಾ ಬಿಜೆಪಿ ನಾಯಕರನ್ನು ಕೈಬಿಡಲು ಮುಖ್ಯಮಂತ್ರಿ ಯಡಿಯೂರಪ್ಪ ತೀರ್ಮಾನಿಸಿರುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ 115ರಿಂದ 120 ಸ್ಥಾನ ಪಡೆಯಬೇಕು ಎಂಬ ಏಕೈಕ ಉದ್ದೇಶದಿಂದ ಅನ್ಯ ಪಕ್ಷಗಳಿಂದ ಬಂದಿರುವ ವಲಸೆ ಶಾಸಕರಿಗೆ ಮಣೆ ಹಾಕುವುದು ಎಷ್ಟು ಸರಿ ಎಂಬ ಪ್ರಶ್ನೆ ಕಾರ್ಯಕರ್ತರಲ್ಲಿ ಉದ್ಭವವಾಗಿದೆ.
ಕಳೆದ ಸಲಕ್ಕೆ ಹೋಲಿಸಿದರೆ ಬಿಜಾಪುರ ಜಿಲ್ಲೆಯ 8 ವಿಧಾನಸಭೆ ಕ್ಷೇತ್ರದಲ್ಲಿ 5 ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಕೇವಲ ಬೆಳ್ಳುಬ್ಬಿಯವರಿಗೆ ಮಾತ್ರ ಸಚಿವ ಸ್ಥಾನವನ್ನು ನೀಡಿದ್ದಾರೆ. ಈ ಅನ್ಯಾಯದ ನಡುವೆ ಪಕ್ಷಾಂತರಿಗಳಿಗೆ ಸ್ಥಾನ ಕಲ್ಪಿಸಲು ಬೆಳ್ಳುಬ್ಬಿ ಅವರನ್ನು ಬಲಿ ಕೊಟ್ಟಿರುವುದು ಯಾವ ನ್ಯಾಯ. ಪಕ್ಷ ಸಂಕಷ್ಟದ ಸ್ಥಿತಿಯಲ್ಲಿದ್ದಾಗ ಸಾಕಷ್ಟು ಶ್ರಮ ವಹಿಸಿ ಪಕ್ಷವನ್ನು ಕಟ್ಟಿವರಲ್ಲಿ ಬೆಳ್ಳುಬ್ಬಿಯವರು ಒಬ್ಬರು, ಆದರೆ ಈಗ ಅವರಿಗೆ ಅನ್ಯಾಯವಾಗುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ. ಬೆಳ್ಳುಬ್ಬಿ ಅವರ ರಾಜೀನಾಮೆ ಪಡೆದಲ್ಲಿ ಮತ್ತಷ್ಟು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಬೆಳ್ಳುಬ್ಬಿ ಸ್ಥಾನಕ್ಕೆ ಉಮೇಶ್ ಕತ್ತಿ ಅವರನ್ನು ತರುವುದು ಯಡಿಯೂರಪ್ಪ ಅವರ ಚಿಂತನೆಯಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ
ತೋಟಗಾರಿಕೆ ಸಚಿವ ಬೆಳ್ಳುಬ್ಬಿ ತಲೆದಂಡ ಖಚಿತ ?


Click it and Unblock the Notifications
