ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಹೆಸರು ಬದಲಾಗಿದೆ!

By Staff
|
Google Oneindia Kannada News

ಭಾರತದ ಕೆಲವು ನಗರಗಳ ಹೆಸರು ಬದಲಾಗಿರುವುದು ನನಗೆ ಗೊತ್ತಿದೆ. (ಕೊಲ್ಕತ್ತ, ಚೆನ್ನೈ ಇತ್ಯಾದಿ) ಆದರೆ, ಕರ್ನಾಟಕದ ಹೆಸರು ಕರುನಾಡು ಎಂದು ಮಾರ್ಪಾಟಾಗಿರುವ ಸಮಾಚಾರ ಗೊತ್ತೇ ಇರಲಿಲ್ಲ ! ಕರ್ನಾಟಕದ ಹೆಸರನ್ನು ಕಡೆಗಣಿಸಿ karunadu.gov.in ಹೆಸರನ್ನು ಉಪಯೋಗಿಸುವುದಕ್ಕೆ ನಮ್ಮ ರಾಜ್ಯ ಸರಕಾರಕ್ಕೆ ಕೇಂದ್ರ ಸರಕಾರ ಆದ್ಯಾವಾಗ ಒಪ್ಪಿಗೆ ನೀಡಿತು ಸ್ವಾಮಿ?

* ಬಿ.ಜಿ.ಮಹೇಶ್

ಬೆಂಗಳೂರು, ಆ. 21 : ನಮ್ಮ ಚೆಲುವ ಕರ್ನಾಟಕದ ಸರಕಾರಿ ಇಲಾಖೆಗಳಿಗೆ ಅಂತರ್ಜಾಲದ ಗಂಧ ಗಾಳಿ ಸೋಕುವುದೇ ಇಲ್ಲ. ಸೋಕುವ ಯಾವ ಲಕ್ಷ್ಣಣಗಳೂ ಕಾಣುತ್ತಿಲ್ಲ. ಇಂಟರ್ನೆಟ್ ಮೂಲಕ ಆದಾಯ ತೆರಿಗೆ ಪಾವತಿ, ಪಾಸ್ ಪೋರ್ಟ್, ಸಿಇಟಿ ಮುಂತಾದ ಕೆಲವು ಅರ್ಜಿ ನಮೂನೆಗಳು ಲಭ್ಯವಾಗುವ ಪ್ರಯೋಜನ ಹೊರತುಪಡಿಸಿದರೆ ನಿಮಗೆ ಹೆಚ್ಚೇನೂ ದಕ್ಕುವುದಿಲ್ಲ. ಅಂತರ್ಜಾಲದ ಅನೇಕಾನೇಕ ಪ್ರಯೋಜನಗಳನ್ನು ಆಡಳಿತದ ಚುಕ್ಕಾಣಿ ಹಿಡಿದಿರುವ ನಮ್ಮ ಅಧಿಕಾರಿ ಮಹಾಶಯರು ಅದ್ಯಾವತ್ತು ಪಡೆಯುತ್ತಾರೋ ಆ ಭಗವಂತನೇ ಬಲ್ಲ.

ನಮ್ಮ ರಾಜ್ಯದ ಸರಕಾರಿ ಇಲಾಖೆಗಳ ಸ್ಥಿತಿ ಹೀಗಾದರೆ ಬೆಂಗಳೂರು ಮಾತ್ರ ಭಾರತದ ಐಟಿ ರಾಜಧಾನಿ! ವೆಬ್ ಸಾಧ್ಯತೆಗಳನ್ನು ದುಡಿಸಿಕೊಳ್ಳುವುದಕ್ಕೆ ನಮ್ಮ ಸರಕಾರಕ್ಕೆ ದಿವ್ಯ ನಿರಾಸಕ್ತಿ. ರಾಜ್ಯವನ್ನು ಆಳುತ್ತಾ ಬಂದಿರುವ ಎಲ್ಲ ಸರಕಾರಗಳೂ ಅಂತರ್ಜಾಲದ ಬಗ್ಗೆ ತೋರುತ್ತಾ ಬಂದಿರುವ ಅನಾದರ ಮತ್ತು ಅಸಡ್ಡೆಯ ಬಗ್ಗೆ ಎಷ್ಟು ಹೇಳಿದರೂ ತೀರದು. ಒಂದು ಇಮೇಲ್ ಅಕೌಂಟನ್ನೂ ಸಹ ತೆರೆಯದ ಹಿರಿಯ ಅಧಿಕಾರಿಗಳು ನಮ್ಮ ಇಲಾಖೆಗಳಲ್ಲುಂಟು.

ಇವತ್ತು ಪ್ರಸಿದ್ಧವಾಗಿರುವ ಜನಜನಿತ ಬೆಂಗಳೂರು ಐಟಿ.ಕಾಂ, ಐಎಎಸ್ ಅಧಿಕಾರಿ ದಿವಂಗತ ಸಂಜಯ್ ದಾಸ್ ಗುಪ್ತ ಅವರ ಮೆದುಳಿನ ಕೂಸು. ನನಗೆ ಗೊತ್ತಿರುವ ಹಾಗೆ ಬೆಂಗಳೂರು ಐಟಿ.ಕಾಂ ಆರಂಭವಾದದ್ದು 1998ರಲ್ಲಿ. ಆ ಐಟಿ ಮೇಳವು ಅಪಾರ ಯಶಸ್ಸು ಕಂಡಿತು. ದೇಶಪ್ರೇಮವನ್ನು ಮೆರೆಯುವ ಉದ್ದೇಶದಿಂದ ಐಟಿ.ಕಾಂ 2005ರಲ್ಲಿ ಐಟಿ.ಇನ್ ಆಗಿ ಪರಿವರ್ತನೆಗೊಂಡಿತು. ಈಗ ಮತ್ತೆ ಬಂದಿದೆ ಹೆಸರು ಬದಲಾವಣೆಯ ಕಾಲ. 2008ರ ನವೆಂಬರ್‌ನಲ್ಲಿ ನಡೆಯುವ ಐಟಿ ಮೇಳಕ್ಕೆ BangaloreIT.biz ಎಂಬ ಹೊಸ ಹೆಸರು ಇಡಲಾಗಿದೆ. ದುರಾದೃಷ್ಟದ ಸಂಗತಿಯೆಂದರೆ, ಐಟಿ ಮೇಳ ಸಾಗಿಬಂದ ದಾರಿಯನ್ನು ಸ್ಮರಿಸುವ ಜಾಲತಾಣಗಳಾಗಿ ಉಳಿಯಬೇಕಿದ್ದ it.com ಮತ್ತು it.in ಅಂತರ್ಜಾಲ ಅಂಗಳ ಚಿಂದಿ ಚಿತ್ರಾನ್ನವಾಗಿದೆ. ಈ ಬಗೆಯ ನಿಸ್ಸೀಮ ನಿರ್ಲಕ್ಷ್ಯ, ಅನಾದರ ಅಕ್ಷಮ್ಯ.

ಮೊನ್ನೆ Wikia.comನಲ್ಲಿ ಕರ್ನಾಟಕ ಕುರಿತ ಯಾವುದೋ ಮಾಹಿತಿಗಾಗಿ ತಡಕಾಡುತ್ತಿದ್ದೆ. ಅಲ್ಲಿ ಮೂಡಿದ ಫಲಿತಾಂಶ ಕಂಡು ಬೆಕ್ಕಸ ಬೆರಗಾದೆ. ಅಲ್ಲಿ ಸಿಗುವ ಮಾಹಿತಿಯ ಒಂದು ಸ್ನ್ಯಾಪ್ ಶಾಟ್ ಹೀಗಿದೆ:

ನಮಗೆಲ್ಲ ತಿಳಿದಿರುವಂತೆ ಕರ್ನಾಟಕ ಸರಕಾರದ ಅಧಿಕೃತ ವೆಬ್ ಸೈಟಿನ ವಿಳಾಸ Karnataka.gov.in. ಆದರೆ, ಇಂಟರ್ ನೆಟ್ಟಿನಲ್ಲಿ ಇವತ್ತು ಎರಡು ಅಧಿಕೃತ ವಿಳಾಸಗಳು ರಾರಾಜಿಸುತ್ತಿವೆ. ಈ ಎರಡೂ ವಿಳಾಸಗಳು ಒಂದೇ ಪುಟಕ್ಕೆ ಕರೆದೊಯ್ದಿದ್ದರೆ ಪರವಾಗಿರಲಿಲ್ಲ. ಒಂದೊಂದು ವಿಳಾಸಗಳೂ ಒಂದೊಂದು ಮನೆಗೆ ಕರೆದೊಯ್ಯುತ್ತಿವೆ. ಭಪ್ಪರೆ!

ಭಾರತದ ಕೆಲವು ನಗರಗಳ ಹೆಸರು ಬದಲಾಗಿರುವುದು ನನಗೆ ಗೊತ್ತಿದೆ. (ಕೊಲ್ಕತ್ತ, ಚೆನ್ನೈ ಇತ್ಯಾದಿ) ಆದರೆ, ಕರ್ನಾಟಕದ ಹೆಸರು ಕರುನಾಡು ಎಂದು ಮಾರ್ಪಾಟಾಗಿರುವ ಸಮಾಚಾರ ಗೊತ್ತೇ ಇರಲಿಲ್ಲ ! ಕರ್ನಾಟಕದ ಹೆಸರನ್ನು ಕಡೆಗಣಿಸಿ karunadu.gov.in ಹೆಸರನ್ನು ಉಪಯೋಗಿಸುವುದಕ್ಕೆ ನಮ್ಮ ರಾಜ್ಯ ಸರಕಾರಕ್ಕೆ ಕೇಂದ್ರ ಸರಕಾರ ಆದ್ಯಾವಾಗ ಒಪ್ಪಿಗೆ ನೀಡಿತು ಸ್ವಾಮಿ?

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X