ಜೈಪುರ ಸ್ಫೋಟಕ್ಕೆ ನಗರದ ವೈದ್ಯ ವಿದ್ಯಾರ್ಥಿ ನೆರವು
ಬೆಂಗಳೂರು, ಆ. 18 : ಕಳೆದ ಮೇ ತಿಂಗಳಲ್ಲಿ ಜೈಪುರ ನಗರದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸ್ಫೋಟಕ ರಸಾಯನಿಕವನ್ನು ಒದಗಿಸಿರುವ ಆರೋಪದ ಮೇಲೆ ಬೆಂಗಳೂರಿನಲ್ಲಿ ಎಐಐಎಂಎಸ್ ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬನನ್ನು ರಾಜಸ್ಥಾನ ಪೊಲೀಸ್ ಬಂಧಿಸಿದ್ದಾರೆ.
ಅಬ್ರಾರ್ ಅಲಿ ಬಂಧಿತ ಆರೋಪಿ. ಬೆಂಗಳೂರಿನ ಪ್ರತಿಷ್ಠಿತ ಎಐಐಎಂಎಸ್ ಕಾಲೇಜಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾನೆ. ಅಬ್ರಾರ್ ಅಲಿ ಕಳೆದ ಮೇ ತಿಂಗಳಲ್ಲಿ ಜೈಪುರದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಅಮೋನಿಯಂ ನೈಟ್ರೆಟ್ ರಸಾಯನಿಕವನ್ನು ಸರಬರಾಜು ಮಾಡಿರುವುದು ಬೆಳಕಿಗೆ ಬಂದಿದೆ. ಶನಿವಾರ ಪೊಲೀಸ್ ಕೈಗೆ ಸಿಕ್ಕಿಬಿದ್ದಿರುವ ಸಿಮಿ ಸಂಘಟನೆ 9ಮಂದಿ ಕಾರ್ಯಕರ್ತರಲ್ಲಿ ಸಾಜಿದ್ ಮನ್ಸೂರಿ ಎಂಬಾತ ನೀಡಿದ ಸುಳುವಿನ ಮೇರೆಗೆ ಭಾನುವಾರ ಅಬ್ರಾರ್ ಅಲಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಹಮದಾಬಾದ್ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಶನಿವಾರ 9 ಮಂದಿ ಸಿಮಿ ಸಂಘಟನೆ ಉಗ್ರರು ಬಂಧಿಸಿದ ರಾಜಸ್ಥಾನ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದ್ದೆ ತಡ ಬೆಂಗಳೂರಿಗೆ ಆಗಮಿಸಿದ ಪೊಲೀಸರು ಶಂಕಿತ ಉಗ್ರ, ವೈದ್ಯಕೀಯ ವಿದ್ಯಾರ್ಥಿ ಅಬ್ರಾರ್ ಅಲಿ ಯನ್ನು ಬಂಧಿಸಿದ್ದಾರೆ. ಅಹಮದಾಬಾದ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿನಕ್ಕೊಳಗಾಗಿರುವ ಉಗ್ರರು ಜೈಪುರದಲ್ಲಿ ನಡೆದಿರುವ ಸ್ಫೋಟದಲ್ಲಿಯೂ ಇವರ ಕೈವಾಡವಿರುವುದು ತಿಳಿದು ಬಂದಿದೆ. ಮೇ ತಿಂಗಳಲ್ಲಿ ಜೈಪುರ ಸ್ಫೋಟದಲ್ಲಿ 65 ಮಂದಿ ಮೃತಪಟ್ಟು ಅನೇಕ ಜನರು ಗಾಯಗೊಂಡಿದ್ದರು.
ಜೈಪುರ ಸ್ಫೋಟಕ್ಕೆ ಸಂಬಂಧಿಸಿದಂತೆ ಜೈಪುರ ನಗರದಲ್ಲಿ ಮತ್ತೆ ಮೂವರ ಶಂಕಿತ ಉಗ್ರರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸರಣಿ ಸ್ಫೋಟಕ್ಕೂ, ಅಬ್ರಾರ್ ಅಲಿಗೂ ಸಂಬಂಧವಿರುವದನ್ನು ವಿಚಾರಣೆ ನಂತರ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
14 ದಿನಗಳ ಕಾಲ ಪೊಲೀಸ್ ವಶಕ್ಕೆ ಸಿಮಿ ಉಗ್ರರು


Click it and Unblock the Notifications
