ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗದಗ ವಿಮಾನ ನಿಲ್ದಾಣ, ಸುಸಜ್ಜಿತ ಆಸ್ಪತ್ರೆಗೆ ಕ್ರಮ

By Staff
|
Google Oneindia Kannada News

ಗದಗ, ಆ.17: ಶಾಂತಿ ಮತ್ತು ಅಹಿಂಸೆಯ ಮಾರ್ಗದಿಂದ ಪಡೆದುಕೊಳ್ಳಲಾದ ಸ್ವಾತಂತ್ರ್ಯವನ್ನು ರಕ್ಷಿಸಿಕೊಂಡು ಅದನ್ನು ಬಲವರ್ಧನೆಗೊಳಿಸಲು ಪ್ರತಿಯೊಬ್ಬರೂ ಮುಂದಾಗುವಂತೆ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಕರೆಯಿತ್ತರು.

62 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ನಗರದ ಕೆ.ಎಚ್.ಪಾಟೀಲ್ ಕ್ರೀಡಾಂಗಣದಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದ ಅವರು , ಬ್ರಿಟೀಷರ ಗುಲಾಮಗಿರಿಯ ಸಂಕೋಲೆಯಿಂದ ಭಾರತವನ್ನು ಮುಕ್ತಗೊಳಿಸಲು ಪ್ರಾಣತ್ಯಾಗ ಮಾಡಿದ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದ ಸಚಿವರು ಸ್ವಾತಂತ್ರ್ಯ ಸಂಗ್ರಾಮದ ವಿವಿಧ ಹೋರಾಟಗಳ ಮೆಲುಕು ಹಾಕಿದರು.

ಮಹಾತ್ಮಾ ಗಾಂಧಿ, ಮಂಗಲಪಾಂಡೆ, ನೇತಾಜಿ ಸುಭಾಷ ಚಂದ್ರ ಬೋಸ್, ನರಗುಂದದ ಬಾಬಾಸಾಹೇಬ, ವೀರರಾಣಿ ಕಿತ್ತೂರ ಚೆನ್ನಮ್ಮನಂತಹ ಸ್ವಾತಂತ್ರ್ಯ ಹೋರಾಟಗಾರರ ಅನುಪಮ ರಾಷ್ಟ್ರಸೇವೆಯನ್ನು ಕೊಂಡಾಡಿದ ಸಚಿವರು ಉತ್ತರ ಕರ್ನಾಟಕವು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿರುವುದನ್ನು ಸ್ಮರಿಸಿಕೊಂಡರು.ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರ ಅನುಷ್ಠಾನಗೊಳಿಸಿದ ಕೃಷಿ ಯೋಜನೆ, ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಪೂರೈಕೆ, ಭಾಗ್ಯಲಕ್ಷ್ಮೀ , ಆರೋಗ್ಯ ಕವಚ, ಡಾ. ನಂಜುಂಡಪ್ಪ ವರದಿ ಅನುಷ್ಠಾನ, ಸಂಧ್ಯಾ ಸುರಕ್ಷಾ , ಸ್ತ್ರೀಶಕ್ತಿ ಗುಂಪು, ನಗರಾಭಿವೃದ್ಧಿ ಯೋಜನೆಗಳಿಗೆ ಸರ್ಕಾರ ಪ್ರಥಮ ಆದ್ಯತೆ ನೀಡಿರುವುದನ್ನು ವಿವರಿಸಿದರು.

ಗದಗನಲ್ಲಿ ವಿಮಾನ ನಿಲ್ದಾಣ
ಜಿಲ್ಲೆಗೆ ಅಗತ್ಯವಿರುವ ವಾಯುಸಂಪರ್ಕ ವಿಮಾನ ನಿಲ್ದಾಣ ರಚನೆಗೆ 200 ಎಕರೆ ವಿಸ್ತೀರ್ಣದ ಸ್ಥಳ ಗುರುತಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಅದೇ ರೀತಿ 22 ಕೋಟಿ ರು. ವೆಚ್ಚದಲ್ಲಿ 250 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೂ ಚಾಲನೆ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದರು. ಸಿಂಗಟಾಲೂರು ಹುಲಿಗುಡ್ಡ ಏತನೀರಾವರಿ ಯೋಜನೆಗೆ ಕ್ರಮ ಕೈಗೊಳ್ಳಲಾಗಿದ್ದು ಪ್ರಸಕ್ತ ವರ್ಷ ಅಲ್ಲಿ ನೀರು ಸಂಗ್ರಹಿಸುವ ನಿರೀಕ್ಷೆಯಿದೆ. ಈ ಯೋಜನೆಯಿಂದ 70 ಹಳ್ಳಿಗಳ 72,035 ಎಕರೆ ನೀರಾವರಿಯಾಗಲಿದೆ ಎಂದು ಸಚಿವರು ತಿಳಿಸಿದರು.

ಗದಗ ಗಜೇಂದ್ರಗಡದಲ್ಲಿ ಪಾಲಿಟೆಕ್ನಿಕ್ ಪ್ರಾರಂಭವಾಗಿದ್ದು, ಮುಂಬರುವ ದಿನಗಳಲ್ಲಿ ಅವುಗಳ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಸಲಾಗುವುದು. ಗದುಗಿನಲ್ಲಿ ಟ್ರಕ್ ಟರ್ಮಿನಲ್ ಸ್ಥಾಪಿಸಲಾಗುವುದು. ಪ್ರವಾಹ ಭೀತಿಯಿರುವ ಜಿಲ್ಲೆಯ 11 ಗ್ರಾಮಗಳ ಸ್ಥಳಾಂತರಕ್ಕೆ ಸಮಗ್ರ ಯೋಜನೆ ರೂಪಿಸಲಾಗಿದೆಯೆಂದು ಸಚಿವರು ತಿಳಿಸಿದರು. ಗದುಗಿನಲ್ಲಿ ಜಿಲ್ಲಾ ರಂಗಮಂದಿರ ಸುವರ್ಣ ರಂಗಮಂದಿರ, ಅಂಬೇಡ್ಕರ್ ಭವನ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆಯಲ್ಲದೇ ಲಕ್ಕುಂಡಿಯನ್ನು ಪ್ರವಾಸೋದ್ಯಮ ತಾಣವನ್ನಾಗಿಸಲು 80 ಲಕ್ಷ ರು.ಗಳ ಯೋಜನೆ ಸಿದ್ಧಗೊಂಡಿದೆ ಎಂದರು. ನಗರದ ಭೀಷ್ಮಕೆರೆ ಆವರಣದಲ್ಲಿ 111ಅಡಿ ಎತ್ತರದ ಬಸವೇಶ್ವರರ ಬೃಹತ್ ಪ್ರತಿಮೆಗೆ ಕ್ರಮ ಕೈಗೊಳ್ಳಲಾಗುತ್ತಿರುವುದನ್ನು ಸಚಿವರು ವಿವರಿಸಿದರು.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X