ನಿಕೇತಾ ಗರ್ಭಪಾತ ಸಮಸ್ಯೆಗೆ ಅಂತಿಮ ತೀರ್ಪು
ಮುಂಬಯಿ, ಆ. 16: ದೋಷಪೂರಿತ ಭ್ರೂಣವನ್ನು ತೆಗೆಸಲು ಹೈಕೋರ್ಟ್ ಮೇಟ್ಟಿಲೇರಿ, ನಿರಾಕರಣೆಗೆ ಒಳಗಾಗಿದ್ದ ನಿಕೇತಾ ಮೆಹ್ತಾ ಅವರಿಗೆ ದೈವವೇ ಸೂಕ್ತ ಪರಿಹಾರ ನೀಡಿದೆ. ಮಂಗಳವಾರ ರಾತ್ರಿ ಇಲ್ಲಿನ ಕಾಂಡಿವ್ಲಿ ಆಸ್ಪತ್ರೆಯಲ್ಲಿ ನಿಕೇತಾಗೆ ಪ್ರಕೃತಿದತ್ತವಾಗಿ ಗರ್ಭಪಾತವಾಗಿದೆ ಎಂದು ಅವರ ಪತಿ ಹರೀಶ್ ಮೆಹ್ತಾ ತಿಳಿಸಿದ್ದಾರೆ.
ಹುಟ್ಟಿಗೆ ಮುಂಚೆಯೇ ಹೃದಯ ಸಂಬಂಧಿತ ಕಾಯಿಲೆ ಒಳಗಾಗಿದ್ದ ಶಿಶುವನ್ನು ತೆಗೆಸಲು ಇಚ್ಛಿಸಿ ಮೆಹ್ತಾ ದಂಪತಿಗಳು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಆದರೆ ಆಗಲೇ ಭ್ರೂಣಕ್ಕೆ 24 ವಾರಗಳಾಗಿದ್ದರಿಂದ ಸ್ಥಳೀಯ ಹೈಕೋರ್ಟ್ ಗರ್ಭಪಾತಕ್ಕೆ ಮುಂದಾಗದಂತೆ ಆದೇಶ ನೀಡಿತ್ತು.
'ನ್ಯಾಯಾಲಯ ನಮಗೆ ಸಹಾಯ ನೀಡಲಿಲ್ಲ. ಆದರೆ, ದೇವರು ನಮಗೆ ಸಹಾಯ ಮಾಡಿದ' ಎಂದು ಹರೀಶ್ ಪ್ರತಿಕ್ರಿಯಿಸಿದ್ದಾರೆ. ಕಾಂಡಿವ್ಲಿಯ ಚಿತಾಗಾರದಲ್ಲಿ 27 ವಾರದ ಭ್ರೂಣದ ಅಂತ್ಯ ಸಂಸ್ಕಾರವನ್ನು ನಡೆಸಲಾಯಿತು. ನಿಕೇತಾ ಆರೋಗ್ಯವಾಗಿದ್ದು, ಹೆಚ್ಚಿನ ವಿಶಾಂತ್ರಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ಹರೀಶ್ ಹೇಳಿದರು.
(ದಟ್ಸ್ ಕನ್ನಡವಾರ್ತೆ)


Click it and Unblock the Notifications
