ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಸಂಕಲ್ಪ: ಯಡಿಯೂರಪ್ಪ

Yeddyurappa's i-day speechಬೆಂಗಳೂರು, ಆ.16: ರಾಜ್ಯವನ್ನು ರಾಷ್ಟ್ರದ ಅಭಿವೃದ್ಧಿಶೀಲ ರಾಜ್ಯಗಳ ಪೈಕಿ ಮುಂಚೂಣಿ ಸ್ಥಾನಕ್ಕೆ ಕೊಂಡೊಯ್ದು ಮಾದರಿ ರಾಜ್ಯವನ್ನಾಗಿಸುವುದು ಸರ್ಕಾರದ ಧ್ಯೇಯವಾಗಿದೆ ಎಂದು ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಸ್ವಾತಂತ್ರೋತ್ಸವದ ಭಾಷಣದಲ್ಲಿ ಹೇಳಿದರು.

ನಗರದ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾಡಿದ ಭಾಷಣದಲ್ಲಿ ಪ್ರಗತಿಪರ ರಾಜ್ಯವಾಗಿರುವ ಕರ್ನಾಟಕ ಪ್ರಸ್ತುತ ರಾಷ್ಟ್ರದ ಅಭಿವೃದ್ಧಿ ಭೂಪಟದಲ್ಲಿ 7ನೇ ಸ್ಥಾನದಲ್ಲಿದೆ. ರಾಜ್ಯವನ್ನು ಮುಂಚೂಣಿ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ 'ಕರ್ನಾಟಕ 2020' ನೀಲನಕ್ಷೆ ಸಿದ್ಧ ಪಡಿಸಲಾಗುತ್ತಿದೆ. ಪ್ರಾಂತೀಯ ಅಸಮಾನತೆ ತೊಡೆದುಹಾಕಿ ಸಮತೋಲಿತ ಅಭಿವೃದ್ಧಿ ಸಾಧಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದರು.

ಸರ್ವರಿಗೂ ಸ್ವಾತಂತ್ರ್ಯದ ಅನುಭವ, ದುರ್ಬಲರಿಗೂ ಭದ್ರತೆ, ಬಡತನ, ಅನಕ್ಷರತೆ ಮತ್ತು ಅಸಮಾನತೆ ನಿವಾರಣೆ, ಎಲ್ಲರನ್ನೂ ಸಮಾನವಾಗಿ ಪರಿಗಣಿಸಿ ಪ್ರಗತಿಪರ ಆಡಳಿತ ನಡೆಸುವುದೇ ಸರ್ಕಾರದ ಧ್ಯೇಯ ಎಂದು ಅವರು ನುಡಿದರು.

2008-09ನೇ ಸಾಲಿಗೆ ರಾಜ್ಯಕ್ಕೆ ನಿಗದಿಯಾದ ಯೋಜನಾಗಾತ್ರ 26,053 ಕೋಟಿ ರು.ಗಳು. ಕಳೆದ ವರ್ಷದ ಯೋಜನಾಗಾತ್ರ 17,783 ಕೋಟಿ ರು.ಗಳು. ಇದರೊಂದಿಗೆ ಹೋಲಿಸಿದಲ್ಲಿ ಶೇಕಡಾ46ರಷ್ಟು ವೃದ್ಧಿಯಾಗಿದೆ. ಇದರೊಂದಿಗೆ ದೇಶದ ಮೂರನೇ ಅತೀ ದೊಡ್ಡ ಯೋಜನಾಗಾತ್ರ ಹೊಂದಿದ ರಾಜ್ಯ ಎನ್ನುವ ಹೆಗ್ಗಳಿಕೆ ಕರ್ನಾಟಕದ್ದಾಗಿದೆ. ಪೂರ್ಣ ಯೋಜನಾ ವೆಚ್ಚವನ್ನು ಮಾಡುವ ಮೂಲಕ ಅಭಿವೃದ್ಧಿಯ ಫಲ ರಾಜ್ಯದ ಜನತೆಗೆ ದೊರೆಯುವಂತೆ ಮಾಡಲು ಸರ್ಕಾರವು ಶ್ರಮಿಸಲಿದೆ ಎಂದರು.

ಆಡಳಿತ ಯಂತ್ರವನ್ನು ಚುರುಕುಗೊಳಿಸಲು ಮತ್ತು ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಇತ್ತೀಚೆಗಷ್ಟೇ ನಡೆಸಿದ 'ಮಂಥನ' ಎಂಬ ಮುಕ್ತ ಚಿಂತನೆಯ ಕಾರ್ಯಾಗಾರವನ್ನು ಮುಂದುವರಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು ನಿಯಮಿತವಾಗಿ ಆಯಾ ಜಿಲ್ಲೆಗಳಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ಕುಂದುಕೊರತೆ ನಿವಾರಿಸುವಂತೆ ಮತ್ತು ಪ್ರತಿ ಗುರುವಾರ ಸಚಿವ ಸಂಪುಟ ಸಭೆಯ ನಂತರ ಸಚಿವರು ಕಡ್ಡಾಯವಾಗಿ ಕಚೇರಿಗಳಲ್ಲೇ ಕಡತ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ನೂತನ ಗಣಿ ನೀತಿ
ರಾಜ್ಯದಿಂದ ಪ್ರತಿ ವರ್ಷ 8 ಸಾವಿರ ಕೋಟಿ ರು ಮೌಲ್ಯದ ಅದಿರು ರಫ್ತಾಗುತ್ತಿದೆ. ಆದರೆ ಸರ್ಕಾರಕ್ಕೆ ರಾಜಧನ ರೂಪದಲ್ಲಿ 80 ಕೋಟಿ ರು. ಮಾತ್ರ ಲಭ್ಯವಾಗುತ್ತಿದೆ. ಆದ್ದರಿಂದ ಅಕ್ರಮ ಗಣಿಗಾರಿಕೆ ಮೇಲೆ ನಿಗಾ ವಹಿಸಲು ನೂತನ ಗಣಿ ನೀತಿ ರೂಪಿಸಲಾಗುವುದು. 'ವಿಶೇಷ ಜಾಗ್ರತಾ ದಳ' ಸ್ಥಾಪಿಸುವ ತಯಾರಿ ನಡೆಯುತ್ತಿದೆ. ನಮ್ಮ ಸರ್ಕಾರ ಬಂದ ಮೇಲೆ ನೂತನ ಗಣಿಗಾರಿಕೆಗೆ ಪರವಾನಗಿ ನೀಡಿಲ್ಲ ಹಾಗೂ ಚಾಲ್ತಿಯಿರುವ ಪರವಾನಗಿಗಳನ್ನು ನವೀಕರಿಸಿಲ್ಲ. ಈ ಬಗ್ಗೆ ಕೇಂದ್ರಕ್ಕೆ ಸೂಚನೆ ನೀಡಲಾಗಿದೆ ಎಂದರು.

ಉದ್ಯೋಗ ಮತ್ತಿತರ ಸವಲತ್ತುಗಳನ್ನು ಅರಸಿ ಹಳ್ಳಿಗಳಿಂದ ನಗರಗಳಿಗೆ ಜನ ವಲಸೆ ಬರುವುದನ್ನು ತಪ್ಪಿಸುವುದು ಸರ್ಕಾರದ ಸಂಕಲ್ಪವಾಗಿದೆ. ಆದ್ದರಿಂದ ಹಳ್ಳಿಗಳಲ್ಲಿ ಉತ್ತಮ ಮೂಲ ಸೌಕರ್ಯದ ಜೊತೆಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವತ್ತ ಗಮನ ಹರಿಸಲಾಗುವುದು. 65 ವರ್ಷ ಮೀರಿದ ಹಿರಿಯ ನಾಗರೀಕರಿಗೆ ಪ್ರತಿ ತಿಂಗಳು 400 ರು.ಗಳ ಮಾಸಾಶನ ನೀಡಲು ಅನುವಾಗುವಂತೆ ಅಗಸ್ಟ್ ತಿಂಗಳ ಅಂತ್ಯಕ್ಕೆ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುವುದು. ಇದರಿಂದ ಒಂದು ಕೋಟಿಗೂ ಹೆಚ್ಚು ಕುಟುಂಬಗಳಿಗೆ ನೇರ ಪ್ರಯೋಜನ ದೊರೆಯಲಿದೆ ಎಂದರು.

ವರುಣನ ಕೃಪೆ ಲಭಿಸಿದ್ದು ಸಂತೋಷ
ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿದೆ. ಕೆರೆ-ಕಟ್ಟೆಗಳು ತುಂಬಿವೆ, ಜಲಾಶಯಗಳು ಭರ್ತಿಯಾಗಿವೆ. ಬರದ ಭೀತಿ ದೂರವಾಗಿದೆ. ವಿದ್ಯುತ್ ಕೊರತೆ ನೀಗಿದೆ. ಇದು ರೈತರೂ ಸೇರಿ ಎಲ್ಲ ವರ್ಗದ ಜನರ ಸಂತಸಕ್ಕೆ ಕಾರಣವಾಗಿದೆ. ಇದಕ್ಕಾಗಿ ವರುಣ ದೇವನಿಗೆ ನಮಿಸುತ್ತೇನೆ ಎಂದು ಹೇಳಿದರು.

ರಾಜ್ಯಕ್ಕೆ ಅಗತ್ಯವಿರುವ ರಸಗೊಬ್ಬರ ಈವರೆಗೂ ಸರಬರಾಜಾಗಿಲ್ಲ. ಲಭ್ಯವಿರುವ ರಸಗೊಬ್ಬರಗಳನ್ನು ಅಗತ್ಯತೆಯ ಅನುಸಾರ ಪಾರದರ್ಶಕವಾಗಿ ಹಂಚಿಕೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಮುಕ್ತ ಮಾರುಕಟ್ಟೆಯಿಂದ ರಸಗೊಬ್ಬರ ಖರೀದಿಸಿ ಹಂಚಲು ಕರ್ನಾಟಕ ಮಾರುಕಟ್ಟೆ ಮಹಾ ಮಂಡಳಿಗೆ 150 ಕೋಟಿ ರು.ಗಳ ನೆರವನ್ನು ಒದಗಿಸಿರುವುದಾಗಿ ಮುಖ್ಯ ಮಂತ್ರಿಗಳು ತಿಳಿಸಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+