ಫಲ್ಗುಣಿ ನದಿಗೆ ಉರುಳಿದ 40 ಜನರಿದ್ದ ಶಾಲಾ ಬಸ್
ಮಂಗಳೂರು, ಆ.14: ಶಾಲಾ ಮಕ್ಕಳು ಸೇರಿದಂತೆ ಒಟ್ಟು 40 ಮಂದಿಯಿದ್ದ ವಾಹನ ಗುರುಪುರ ಬಳಿ ಫಲ್ಗುಣಿ ನದಿಗೆ ಗುರುವಾರ(ಆ.14) ಬೆಳಗ್ಗೆ ಉರುಳಿ ಬಿದ್ದಿದೆ. ಇದುವರೆಗೂ 5 ಶವಗಳನ್ನು ಹೊರತೆಗೆಯಲಾಗಿದ್ದು ಚಿಕಿತ್ಸೆಗಾಗಿ 14 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ.
ಇಂದು ಬೆಳಗ್ಗೆ ಶಾಲಾ ಮಕ್ಕಳು ಸೇರಿದಂತೆ ಒಟ್ಟು 40 ಜನರನ್ನು ಹೊತ್ತೊಯ್ಯುತ್ತಿದ್ದ ಕೈಕಂಬದ ಬಾಮಿ ಶಾಲೆಯ ವಾಹನ ಚಾಲಕನ ನಿಯಂತ್ರಣ ತಪ್ಪಿ ಫಲ್ಗುಣಿ ನದಿಗೆ ಉರುಳಿ ಬಿತ್ತು. ಘಟನೆ ಉಳಾಯಿ ಬೆಟ್ಟುವಿನ ಬಳಿ ಸಂಭವಿಸಿದೆ. ಶಾಲಾ ವಾಹನ ಫಲ್ಗುಣಿ ನದಿಗೆ ಉರುಳಿ ಬಿದ್ದ ಘಟನೆಯನ್ನು ಕಂಡ ಕೂಡಲೆ ಘಟನಾ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ವಾಹನವನ್ನು ಮೇಲೆತ್ತಿ ಆಗಬಹುದಾಗಿದ್ದ ಮತ್ತಷ್ಟು ಅನಾಹುತವನ್ನು ತಪ್ಪಿಸಿದ್ದಾರೆ. ಮಳೆಯ ಅಬ್ಬರ ನಡುವೆಯೂ ಪರಿಹಾರ ಕಾರ್ಯ ನಿಧಾನಗತಿಯಲ್ಲಿ ಮುಂದುವರಿದಿದೆ.
ಸುರಿಯುತ್ತಿರುವ ಭಾರೀ ಮಳೆಯನ್ನೂ ಲೆಕ್ಕಿಸದೆ ಜಿಲ್ಲಾಧಿಕಾರಿ, ಎಸ್ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಅಗ್ನಿಶಾಮಕ ದಳದ ಸಿಬ್ಬಂದಿಯೂ ಸ್ಥಳಕ್ಕೆ ಆಗಮಿಸಿ ರಕ್ಷಣ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಜಿಲ್ಲಾ ಉತ್ಸುವಾರಿ ಸಚಿವ ಜೆ.ಕೃಷ್ಣ ಪಾಲೇಮಾರ್ ಸ್ಥಳಕ್ಕೆ ಆಗಮಿಸಿ ರಕ್ಷಣ ಕಾರ್ಯದಲ್ಲಿ ನಿಮಗ್ನರಾಗಿದ್ದಾರೆ. ಮೃತರ ಕುಟುಂಬಕ್ಕೆ 1ಲಕ್ಷ ಪರಿಹಾರವನ್ನು ಜಿಲ್ಲಾಡಳಿತ ಘೋಷಿಸಿದೆ.
ಸಹಾಯವಾಣಿ: 0824-2220500
(ದಟ್ಸ್ಕನ್ನಡ ವಾರ್ತೆ)


Click it and Unblock the Notifications
