ಆಡಳಿತ ಚುರುಕಿಗೆ ಪ್ರತಿ ಗುರುವಾರ ಸಂಪುಟ ಸಭೆ
ಬೆಂಗಳೂರು,ಆ.14: ಪ್ರತಿ ಗುರುವಾರ ವಿಧಾನಸೌಧದಲ್ಲಿ ಸಂಪುಟ ಸಭೆ ನಡೆಯುವ ಕಾರಣ ಇನ್ನು ಮುಂದೆ ಪ್ರತಿ ಗುರುವಾರಗಳಂದು ವಿಧಾನಸಭೆ ಮತ್ತು ವಿಕಾಸ ಸೌಧಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಪ್ರತಿ ಗುರುವಾರ ಬೆಳಗ್ಗೆ 9ರಿಂದ 11ರವರೆಗೆ ಸಂಪುಟ ಸಭೆ ನಡೆಯಲಿದೆ. ನಂತರ ಸಚಿವರು,ಅಧಿಕಾರಿಗಳು ತಮ್ಮ್ಮ ಕಚೇರಿಯಲ್ಲಿ ಕಡತಗಳ ವಿಲೇವಾರಿ ಕೆಲಸದಲ್ಲಿ ಮಗ್ನರಾಗಲಿದ್ದಾರೆ. ಭಾರತೀಯ ನಿರ್ವಹಣಾ ಸಂಸ್ಥೆಯಲ್ಲಿ(ಐಐಎಂ) ಬುಧವಾರ ಸಚಿವರು ಮತ್ತು ಉನ್ನತಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ನಿರ್ಧಾರ ಪ್ರಕಟಿಸಿದರು. ಮುಂದಿನ ಗುರುವಾರದಿಂದ ಈ ನಿರ್ಧಾರ ಜಾರಿಯಾಗಲಿದೆ.
ಜಡ್ಡುಗಟ್ಟಿರುವ ಆಡಳಿತವನ್ನು ಚುರುಕುಗೊಳಿಸಲು ಹಾಗೂ ಸರ್ಕಾರಿ ಇಲಾಖೆಗಳಲ್ಲಿ ದಕ್ಷತೆ ಮೂಡಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಾಗೆಯೇ ಎರಡನೇ ಶನಿವಾರ ಹೊರತುಪಡಿಸಿ ಪ್ರತಿ ಶನಿವಾರ ತಹಶೀಲ್ದಾರ್‌ಗಳು ಹೋಬಳಿಮಟ್ಟದಲ್ಲಿ ಕಡತ ವಿಲೇವಾರಿ ಸಭೆಗಳನ್ನು ನಡೆಸಬೇಕು. ಈ ಸಭೆಗಳಲ್ಲಿ ಜಿಲ್ಲಾಧಿಕಾರಿಗಳು ಭಾಗವಹಿಸಿ ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹರಿಸುವ ಸುತ್ತೋಲೆ ಹೊರಡಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಬಡವರಿಗೆ ಸರ್ಕಾರ ನೀಡುವ ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮಿ,ಅಂಗವಿಕಲರಿಗೆ ಮಾಸಿಕ ಹಣ ನೀಡುವಲ್ಲಿ ಕಿರುಕುಳ ನೀಡುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಎಚ್ಚರಿಸಿದರು. ಇನ್ನು ಮುಂದೆ ಸರ್ಕಾರಿ ನೌಕರಿ ಬಯಸುವವರಿಗೆ ಕಂಪ್ಯೂಟರ್ ಜ್ಞಾನ ಕಡ್ಡಾಯಗೊಳಿಸಲಾಗುತ್ತದೆ. ಸೇವೆಯಲ್ಲಿರುವ ನೌಕರರಿಗೆ ತರಬೇತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
(ದಟ್ಸ್‌ಕನ್ನಡ ವಾರ್ತೆ)


Click it and Unblock the Notifications
