ವರ್ಣರಂಜಿತ ಸ್ವಾತಂತ್ರ್ಯೋತ್ಸವಕ್ಕೆ ಬೆಂಗಳೂರು ಸಜ್ಜು
ಬೆಂಗಳೂರು, ಆ.14: ಸ್ವಾತಂತ್ರ್ಯದಿನಾಚರಣೆಯ ಪ್ರಯುಕ್ತ ಶುಕ್ರವಾರ ಬೆಂಗಳೂರಿನಲ್ಲಿ ವಿವಿಧ ಸಂಘ ಸಂಸ್ಥೆಗಳು ಹಲವು ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಜೆ 6.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದೆ.
ಕಾರ್ಯಕ್ರಮದಲ್ಲಿ ಕೆ.ಜಯರಾಂ ಅವರಿಂದ ನಾದಸ್ವರ,ರಮೇಶ್ಚಂದ್ರ,ವಿಜಯ ಹಾವನೂರ್,ದಿವಾಕರ್ ಕಶ್ಯಪ್,ಸುರೇಖ,ಸುನೀತಾ,ನರಸಿಂಹ,ಹರೀಶ್ ಅವರಿಂದ ದೇಶಭಕ್ತಿ ಗೀತೆಗಳ ಗಾಯನ ನಡೆಯಲಿದೆ. ವೆಂಕಟೇಶ್ವರ ನಾಟ್ಯ ಮಂದಿರದಿಂದ ನೃತ್ಯ ರೂಪಕ, ಸುಜಾತ ಮೂರ್ತಿ ತಂಡದಿಂದ ಡೊಳ್ಳು ಕುಣಿತ, ವೈ.ಕೆ.ಮುದ್ದುಕೃಷ್ಣ ಮತ್ತು ತಂಡದಿಂದ ಸುಗಮ ಸಂಗೀತ,ಕೋಲಾರದ ಆರ್. ಶ್ರೀನಿವಾಸ್ ಹುತ್ತೂರು ಮತ್ತು ತಂಡದಿಂದ ತಮಟೆ, ತರೀಕೆರೆಯ ಎಂ.ಆರ್.ಬಸಪ್ಪ ತಂಡದಿಂದ ವೀರಗಾಸೆ,ಮಂಡ್ಯದ ಕೆ.ಪಿ.ದೇವರಾಜ್ ತಂಡದಿಂದ ಪೂಜಾ ಕುಣಿತ,ಹರಿಹರದ ಮಾರುತಿ ಯುವಕ ಡೊಳ್ಳಿನ ಸಂಘದಿಂದ ಡೊಳ್ಳು ಕುಣಿತ, ಬಾಗಲಕೋಟೆ ಮಡಿವಾಳಪ್ಪ ಮ.ಕರಡಿ ತಂಡದಿಂದ ಕರಡಿ ಮಜಲು ನಡೆಯಲಿದೆ. ಈ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಾಜ್ಯಪಾಲ ರಾಮೇಶ್ವರ್ ಠಾಕೂರ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ.
ಜಾಲಹಳ್ಳಿಯ ಬಿಇಎಲ್‌ನ ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರದಲ್ಲಿ, ಕೋಲ್ಸ್ ಪಾರ್ಕ್ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಉದ್ಯಾನವನದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಲಾಗಿದೆ.
ರಾಜ್ಯದಲ್ಲಿ ಕಟ್ಟೆಚ್ಚರ
ಸ್ವಾತಂತ್ರ್ಯ ದಿನಾಚರಣೆಗೆ ಸಂದರ್ಭದಲ್ಲಿ ಯಾವುದೇ ಹಿಂಸಾಚಾರ ನಡೆಯದಂತೆ ರಾಜ್ಯದ ಎಲ್ಲೆಡೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಶ್ರೀಕುಮಾರ್ ತಿಳಿಸಿದ್ದಾರೆ. ಬೆಂಗಳೂರು ಸೇರಿದಂತೆ ಹುಬ್ಬಳ್ಳಿ,ಮೈಸೂರು, ಬೆಳಗಾವಿ ನಗರದಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.
(ದಟ್ಸ್‌ಕನ್ನಡ ವಾರ್ತೆ)


Click it and Unblock the Notifications
