ವಿಮಾನ ನಿಲ್ದಾಣದಲ್ಲಿ ವಿಐಪಿಗಳಿಗೆ ವಿಶೇಷ ಲಾಂಜ್
ಬೆಂಗಳೂರು, ಆ.14: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 'ವಿಐಪಿ'ಗಳಿಗಾಗಿ ವಿಶೇಷ ಲಾಂಜ್ ನಿರ್ಮಿಸಲಾಗುವುದು ಎಂದು ವಿಮಾನ ನಿಲ್ದಾಣದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಲ್ಬರ್ಟ್ ಬ್ರೂನರ್ ತಿಳಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗಳಿಗಾಗಿ ಈಗಾಗಲೇ ವಿವಿಐಪಿ ಲಾಂಜ್ ಇದೆ. ಈಗ ವಿಐಪಿ ಲಾಂಜ್ ನಿರ್ಮಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ವಿಮಾನ ನಿಲ್ದಾಣದಲ್ಲಿ ಆರಂಭದಲ್ಲಿ ಇದ್ದ ಸಮಸ್ಯೆಗಳನ್ನು ನಿವಾರಿಸಲಾಗಿದ್ದು, ಈಗ ವಿಮಾನ ನಿಲ್ದಾಣದಲ್ಲಿ ಉತ್ತಮ ಶೌಚಾಲಯ, ಸ್ವಚ್ಛತೆಗೆ ಪ್ರಾಧಾನ್ಯತೆ ನೀಡಲಾಗಿದ್ದು ಟ್ಯಾಕ್ಸಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಬ್ರೂನರ್ ಹೇಳಿದರು.
ಪ್ರಸ್ತುತ ವಿಮಾನ ನಿಲ್ದಾಣದಲ್ಲಿ ಮೊದಲ ವರ್ಷದಲ್ಲಿ ಪ್ರಯಾಣಿಕರ ಸಂಖ್ಯೆ 11ಲಕ್ಷದಷ್ಟಿದೆ. ವಿಮಾನ ನಿಲ್ದಾಣವನ್ನು ಮತ್ತಷ್ಟು ವಿಸ್ತರಿಸಿದ ಮೇಲೆ ಪ್ರಯಾಣಿಕರ ಸಂಖ್ಯೆ 30ಲಕ್ಷದಷ್ಟು ಏರಿಕೆಯಾಗಲಿದೆ ಎಂದು ಬ್ರೂನರ್ ಮಾಹಿತಿ ನೀಡಿದರು. ನಂತರ ಸ್ಥಳೀಯ ಟ್ಯಾಕ್ಸಿಗಳಿಗೆ ಅನುಮತಿ ನಿರಾಕರಿಸಿರುವ ಕುರಿತು ಮಾತನಾಡಿದ ಅವರು, ನಿಗದಿತ ಅಂತಾರಾಷ್ಟ್ರೀಯ ಗುಣಮಟ್ಟವನ್ನು ತಲುಪಲು ಅವರಿಗೆ ಸಾಧ್ಯವಾಗದೆ ಅವರಿಗೆ ಅನುಮತಿ ನಿರಾಕರಿಸಲಾಯಿತು.ಟೆಂಡರ್ ಕರೆದಾಗ ಅವರು ಪಾಲ್ಗೊಂಡಿರಲಿಲ್ಲ ಎಂದರು.
(ದಟ್ಸ್ಕನ್ನಡ ವಾರ್ತೆ)