ಶಾಸ್ತ್ರೀಯ ಸ್ಥಾನಮಾನ : ಸುಪ್ರಿಂಕೋರ್ಟ್ ಗೆ ಮೊರೆ
ಮಂಗಳೂರು, ಆ. 10 : ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಲು ಕೆಲವು ತಮಿಳು ಸಂಘಟನೆಗಳು ಅಡ್ಡಗಾಲು ಹಾಕಲು ಯತ್ನಿಸತೊಡಗಿವೆ. ಅಗತ್ಯ ಬಿದ್ದಲ್ಲಿ ರಾಜ್ಯ ಸರ್ಕಾರವು ಸುಪ್ರಿಂಕೋರ್ಟ್ ಗೆ ಮೊರೆ ಹೋಗುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ನಗರದ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳು ಈಗಾಗಲೇ ಶಾಸ್ತ್ರೀಯ ಸ್ಥಾನಮಾನದ ಗೌರವವನ್ನು ಪಡೆದುಕೊಂಡಿದ್ದು, ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆಯುವ ಸಂದರ್ಭದಲ್ಲಿ ಕುತಂತ್ರ ಆರಂಭಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಮಿಳು ಭಾಷೆಗೆ ಇರುವ ಅರ್ಹತೆ ಕನ್ನಡ ಭಾಷೆಗೂ ಇದೆ. ಈ ವಿಷಯದಲ್ಲಿ ರಾಜ್ಯ ಸರ್ಕಾರ ಸಂಘರ್ಷ ನಡೆಸಲು ತೀರ್ಮಾನಿಸಿದೆ. ಅಗತ್ಯ ಬಿದ್ದರೆ ಸುಪ್ರಿಂಕೋರ್ಟ್ ಗೂ ಹೋಗುತ್ತೇವೆ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಪೊಲೀಸ್ ಇಲಾಖೆಯನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆಯಿಟ್ಟಿದ್ದು, ಪೊಲೀಸ್ ಸಿಬ್ಬಂದಿಗೆ ಅಗತ್ಯ ತರಬೇತಿ ಮತ್ತು ನಕ್ಸಲ್ ನಿಗ್ರಹ ಪಡೆ ಮತ್ತಷ್ಟು ಬಲಗೊಳಿಸಲು ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು. ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆ ಉಂಟಾಗಿದೆ. ಕರಾವಳಿ ಮತ್ತು ಉತ್ತರ ಕರ್ನಾಟಕದ ಕೆಲ ಕಡೆ ಮಳೆ ಕೊರತೆಯಿಂದ ರೈತರ ಜೀವನ ಸಂಕಷ್ಟಕ್ಕೆ ನಿಲುಕಿದೆ. ಈ ಹಿನ್ನೆಲೆಯಲ್ಲಿ ಮಳೆಯಾಧರಿತ ರೈತರಿಗೆ ತಿಂಗಳಿಗೆ ಸಾವಿರ ರುಪಾಯಿ ಸಹಾಯಧನ ನೀಡಲಾಗುವುದು. ರೈತರ ಹಿತ ಕಾಯುವ ದೃಷ್ಟಿಯಿಂದ ಬಜೆಟ್ ನಲ್ಲಿ 500 ನಿಧಿಯನ್ನು ಕಾಯ್ದಿರಿಸಲಾಗಿದೆ ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಮರೀಚಿಕೆಯಾಗುತ್ತಿರುವ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ, ತಮಿಳರಿಂದ ವಿರೋಧ


Click it and Unblock the Notifications
