ಕೇಂದ್ರದ ಕೈಸೇರಿದ ಶಾಸ್ತ್ರೀಯ ಸ್ಥಾನಮಾನ ವರದಿ
ನವದೆಹಲಿ, ಆ. 8 : ಕನ್ನಡ ಮತ್ತು ತೆಲುಗು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವುದಕ್ಕಾಗಿ ರೂಪಿಸಲಾಗಿರುವ ಭಾಷಾತಜ್ಞರ ಸಮಿತಿ ಸಭೆ ವರದಿಯನ್ನು ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು.ಭಾಷಾ ತಜ್ಞರ ಸಮಿತಿಯ ಅರ್ಹತೆಯನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಚೆನ್ನೈ ಹೈಕೋರ್ಟ್ನಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಕಾರಣ ವರದಿ ಸಲ್ಲಿಸುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.
ಹಿರಿಯ ಭಾಷಾ ತಜ್ಞರಾದ ಪ್ರೊ. ಬಿ.ಎಚ್.ಕೃಷ್ಣಮೂರ್ತಿ, ಡಾ.ಅಶ್ವಿನಿ ಅಬ್ಬಿ, ಪ್ರೊ.ಸುಬ್ಬಾರಾವ್, ಪ್ರೊ.ಬಿ.ಎನ್.ಪಟ್ನಾಯಕ್ ಮತ್ತು ಉದಯ್ ನಾರಾಯಣ ಸಿಂಗ್ ನೇತೃತ್ವದ ಭಾಷಾ ತಜ್ಞರ ಸಭೆ ಶುಕ್ರವಾರ ಬೆಳಿಗ್ಗೆ ಕೇಂದ್ರ ಸಾಹಿತ್ಯ ಅಕಾಡಮಿ ಕಚೇರಿಯಲ್ಲಿ ಸಭೆ ಸೇರಿ ಸಮಗ್ರವಾಗಿ ಚರ್ಚೆ ನಡೆಸಿತು. ನಂತರ ಕನ್ನಡ ಮತ್ತು ತೆಲುಗು ಭಾಷೆಗೆ ಸ್ಥಾನಮಾನ ನೀಡುವ ಕುರಿತು ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು. ಕೇಂದ್ರ ಸಾಹಿತ್ಯ ಅಕಾಡಮಿ ಅಧ್ಯಕ್ಷ ಸುನೀಲ್ ಗಂಗೋಪಾಧ್ಯಯ ಕೊಲ್ಕತ್ತಾದಲ್ಲಿರುವ ಕಾರಣ ಸಭೆಗೆ ಹಾಜರಾಗಿರಲಿಲ್ಲ.
ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ಕುರಿತಂತೆ ಕೇಂದ್ರ ಸರ್ಕಾರ ನೇಮಿಸಿದ್ದ ಭಾಷಾ ತಜ್ಞರ ಸಮಿತಿಯ ಅರ್ಹತೆಯನ್ನೇ ಪ್ರಶ್ನಿಸಿ ತಮಿಳುನಾಡಿನ ಹಿರಿಯ ವಕೀಲ ಆರ್.ಗಾಂಧಿ ಎನ್ನುವವರು ಚೆನ್ನೈ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಿತಿ ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದು ಅನುಮಾನವಾಗಿತ್ತು. ಅಲ್ಲದೆ, ಸಮಿತಿಯಲ್ಲಿರುವ ತಮಿಳುನಾಡಿನ ಇಬ್ಬರು ಸದಸ್ಯರಾದ ಕುಳೆಂದೈವೇಲು ಮತ್ತು ಕಣ್ಣನ್ ಅವರುಗಳು ಕನ್ನಡ ಮತ್ತು ತೆಲುಗು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಲು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಈ ಎಲ್ಲ ವಿಘ್ನಗಳನ್ನು ದಾಟಿ ವರದಿಯೂ ಸುರಕ್ಷಿತವಾಗಿ ಕೇಂದ್ರ ಸರ್ಕಾರದ ಕೈಸೇರಿದೆ. ಈಗ ಕೇಂದ್ರ ಸರ್ಕಾರದ ಬಳಿ ಉಳಿದಿರುವುದು ಕನ್ನಡ ಮತ್ತು ತೆಲುಗು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವುದಷ್ಟೆ.
(ದಟ್ಸ್ ಕನ್ನಡ ವಾರ್ತೆ)
ಮರೀಚಿಕೆಯಾಗುತ್ತಿರುವ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ


Click it and Unblock the Notifications
