ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರದಲ್ಲಿ ನಾಲ್ಕು ಮಂದಿ 'ಹುಸಿ' ಉಗ್ರರ ಬಂಧನ

By Staff
|
Google Oneindia Kannada News

ಬೆಂಗಳೂರು, ಆ.8: ಬಾಂಬ್ ಇಡಲಾಗಿದೆ ಎಂದು ಹುಸಿ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ ನಾಲ್ಕು ಮಂದಿಯನ್ನು ಸಂಜಯನಗರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಕೆಲವರು ತಮಾಷೆಗಾಗಿ ಮತ್ತೆ ಕೆಲವರು ಯಾರದೋ ಮೇಲಿನ ಸೇಡನ್ನು ತೀರಿಸಿಕೊಳ್ಳಲು ಹಾಗೂ ಶಾಲೆ ತಪ್ಪಿಸಿಕೊಳ್ಳಲು ವಿದ್ಯಾರ್ಥಿಗಳು ಬಾಂಬ್ ಇಟ್ಟಿರುವುದಾಗಿ ಹುಸಿ ಕರೆ ಮಾಡುತ್ತಿದ್ದದು ತನಿಖೆಯಿಂದ ದೃಢಪಟ್ಟಿದೆ.

ಸೆಕ್ಯುರಿಟಿ ಗಾರ್ಡ್‌ಗಳ ಗುಂಪೊಂದು ಹುಸಿ ಕರೆ ಮಾಡಿ ಪೊಲೀಸ್ ಇಲಾಖೆಯನ್ನು ಗಡಗಡ ನಡುಗಿಸುತ್ತಿತ್ತು. ಈಗ ಇವರು ಸಂಜಯನಗರ ಪೊಲೀಸ್ ಠಾಣೆಯ ಅತಿಥಿಗಳು. ತಲೆಮರೆಸಿಕೊಂಡಿರುವ ಮತ್ತೊಬ್ಬ ಸೆಕ್ಯುರಿಟಿ ಗಾರ್ಡ್‌ಗಾಗಿ ಪೊಲೀಸರು ವ್ಯಾಪಕ ಜಾಲ ಬೀಸಿದ್ದಾರೆ. ಈ ಕಿಡಿಗೇಡಿಗಳು ಜು.27ರಂದು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆಮಾಡಿ ಹೊಸ ಸೀನಪ್ಪ ಬಡಾವಣೆಯ ಬಿಇಎಲ್ ರಸ್ತೆಯಲ್ಲಿರುವ ರಂಕಾ ಅಪಾರ್ಟ್‌ಮೆಂಟ್‌ಗೆ ಬಾಂಬ್ ಇಟ್ಟಿರುವುದಾಗಿ ಕರೆಮಾಡಿದ್ದರು.

ಈಶ್ವರಿ ಎಂಬವರಿಗೆ ಸೇರಿದ್ದ ಮೊಬೈಲ್‌ನಿಂದ ಈ ಕರೆ ಬಂದಿತ್ತು ಎಂಬುದನ್ನು ಪೊಲೀಸರು ಪತ್ತೆಹಚ್ಚಿದರು. ಈ ಮೊಬೈಲನ್ನು ದಿನೇಶ್ ಎಂಬುವರು ಬಳಸುತ್ತಿರುವುದಾಗಿ ತಿಳಿದುಕೊಂಡ ಪೊಲೀಸರು ಆತನನ್ನು ವಿಚಾರಿಸಲು ಅಪಾರ್ಟ್‌ಮೆಂಟ್ ಒಂದರ ಬಳಿ ಹೋದರು. ಅಲ್ಲೇ ಇದ್ದ ದಿನೇಶ್ ಪೊಲೀಸರನ್ನು ನೋಡುತ್ತಿದ್ದಂತೆ ಪರಾರಿಯಾದ. ಸೆಕ್ಯುರಿಟಿ ಗಾರ್ಡ್‌ಗಳಾಗಿ ಉದ್ಯೋಗ ಮಾಡುತ್ತಿರುವ ಆಂಧ್ರ ಮೂಲದ ರಮೇಶ್(19),ಕಾಂತರಾಜು(19) ಹಾಗೂ ಗುಲ್ಬರ್ಗ ಮೂಲದ ಅನಿಲ್ ಕುಮಾರ್(21) ಅವರನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ. ಇವರು ಹುಸಿ ಕರೆಗಳನ್ನು ಮಾಡಲು ಹವಣಿಸಿರುವ ವಿಚಾರವನ್ನು ಬಾಯ್ಬಿಟ್ಟಿದ್ದಾರೆ. ನ್ಯಾಯಾಲಕ್ಕೆ ಈ ಆರೋಪಿಗಳನ್ನು ಒಪ್ಪಿಸಲಾಗಿದೆ.

ಮತ್ತೊಬ್ಬನ್ನು ಇಕ್ಕಟ್ಟಿಗೆ ಸಿಕ್ಕಿಸಲು
ರೆಸಿಡೆನ್ಸಿ ರಸ್ತೆಯ ಕಮರ್ಷಿಯಲ್ ಕಾಂಪ್ಲೆಕ್ಸ್‍ನಲ್ಲಿ ಕೆಲಸ ಮಾಡುತ್ತಿರುವ ಲಕ್ಷ್ಮಿ ಪುತ್ರ ಎಂಬ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ನಾನು ಬಹುರಾಷ್ಟ್ರೀಯ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿರುವುದಾಗಿ, ತನ್ನ ಹೆಸರು ಮಾಯನಗೌಡ ಎಂದು ಪರಿಚಯ ಮಾಡಿಕೊಂಡು ಪೊಲೀಸರಿಗೆ ಕರೆ ಮಾಡಿದ್ದ.ಪೊಲೀಸರ ವಿಚಾರಣೆ ವೇಳೆ ತನಗೂ ಹಾಗೂ ಮಾಯನಗೌಡ ಎಂಬವರಿಗೂ ಹಳೆಯ ವೈಷಮ್ಯ ಇರುವ ಕಾರಣ ಆತನ ಹೆಸರು ಹೇಳಿ ಇಕ್ಕಟ್ಟಿಗೆ ಸಿಕ್ಕಿಸಲು ಹೀಗೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಶಾಲೆಗೆ ಚಕ್ಕರ್ ಹೊಡೆಯಲು
ಭಾರತೀನರಗದ ಕೇಂಬ್ರಿಡ್ಜ್ ಸೆಂಟ್ರಲ್ ಶಾಲೆಯಲ್ಲಿ ಬಾಂಬ್ ಇಡಲಾಗಿದೆ ಎಂದು ಗುರುವಾರ ಕರೆ ಬಂದಿತ್ತು. ಬೆಳಗ್ಗೆ 10 ಗಂಟೆ ಸಮಯದಲ್ಲಿ ಕರೆ ಮಾಡಿ ಮುಂದಿನ ಒಂದು ಗಂಟೆ ಸಮಯದಲ್ಲಿ ಬಾಂಬ್ ಸ್ಫೋಟವಾಗುವುದಾಗಿ ತಿಳಿಸಿದರು. ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿ ಪರೀಕ್ಷಿಸಲಾಗಿ ಅಲ್ಲಿ ಯಾವುದೇ ಬಾಂಬ್ ಪತ್ತೆಯಾಗದೆ ಇದು ಹುಸಿ ಕರೆ ಎಂದು ತಿಳಿಯಿತು.

ಈ ಕರೆ ಫ್ರೇಜರ್ ಟೌನ್‌ನ ಸಾರ್ವಜನಿಕ ದೂರವಾಣಿ ಬೂತ್‌ನಿಂದ ಬಂದಿರುವುದನ್ನು ಪತ್ತೆ ಹಚ್ಚಿ ಅಲ್ಲಿನ ಕಾಯಿನ್ ಬೂತ್‌ನ ಮಾಲಿಕರನ್ನು ವಿಚಾರಣೆ ಮಾಡಿದರು. ಕೆಲವು ಕೇಂಬ್ರಿಡ್ಜ್ ಶಾಲೆಯ ವಿದ್ಯಾರ್ಥಿಗಳು ಇಲ್ಲಿಂದ ಕರೆ ಮಾಡಿರುವುದಾಗಿ ಅವರು ತಿಳಿಸಿದರು. ಆದರೆ ಪೊಲೀಸರು ಯಾರನ್ನು ಬಂಧಿಸಿಲ್ಲ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X