ಭಾರತ- ಲಂಕಾ ಏಕದಿನ ಸರಣಿ ತಂಡ ಪ್ರಕಟ
ನವದೆಹಲಿ, ಆ. 7 : ಭಾರತ- ಶ್ರೀಲಂಕಾ ನಡುವೆ ಆ.18ರಿಂದ ನಡೆಯಲಿರುವ ಏಕದಿನ ಸರಣಿಗೆ ಹಾಗೂ ಸೆ.11ರಿಂದ ನಡೆಯಲಿರುವ ಐಸಿಸಿ ಚಾಂಪಿಯನ್ ಟ್ರೋಫಿಗೆ ಎರಡು ಬೇರೆ ಬೇರೆ ತಂಡಗಳನ್ನು ಆಯ್ಕೆ ಮಾಡಲಾಗಿದೆ. ಎರಡೂ ಸರಣಿಗೆ ಮಹೇಂದ್ರಸಿಂಗ್ ಧೋನಿ ನಾಯಕರಾಗಿ ಆಯ್ಕೆಯಾಗಿದ್ದಾರೆ. ಸೆಪ್ಟೆಂಬರ್ 11ರಿಂದ ಪಾಕಿಸ್ತಾನದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ ಟ್ರೋಫಿಯಲ್ಲಿ 8 ತಂಡಗಳು ಭಾಗವಹಿಸುತ್ತಿವೆ.
ಸತತ ವಿಫಲ ಕಂಡಿದ್ದ ದಿನೇಶ್ ಕಾರ್ತಿಕ್, ರಾಬಿನ್ ಉತ್ತಪ್ಪ, ಯೂಸೂಫ್ ಪಠಾಣ್ , ಪಿಯೂಶ್ ಚಾವ್ಲಾ, ಮನ್ ಪ್ರಿತ್ ಗೋನಿಯನ್ನು ತಂಡದಿಂದ ಕೈಬಿಡಲಾಗಿದೆ. ಇಶಾಂತ್ ಶರ್ಮಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ರಾಬಿನ್ ಉತ್ತಪ್ಪ ಜಾಗದಲ್ಲಿ 19 ವರ್ಷದೊಳಗಿನ ವಿಶ್ವಕಪ್ ವಿಜೇತ ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿ ಏಕದಿನ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹೆಚ್ಚುವರಿ ವಿಕೆಟ್ ಕೀಪರ್ ಆಗಿ ಪಾರ್ಥೀವ್ ಪಟೇಲ್ ಮತ್ತು ವೇಗಿ ಪ್ರವೀಣ್ ಕುಮಾರ್ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ.
ಏಕದಿನ ತಂಡಕ್ಕೆ ಹಿರಿಯ ಆಟಗಾರರಾದ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಅವರನ್ನು ಮತ್ತೆ ಕಡೆಗಣಿಸಲಾಗಿದೆ. ಬಿಸಿಸಿಐ ಯುವಕರಿಗೆ ಮತ್ತೆ ಮಣೆ ಹಾಕಿದೆ. ಸತತವಾಗಿ ವಿಫಲರಾಗುತ್ತಿದ್ದರೂ ಸಚಿನ್ ಮತ್ತೆ ಆಯ್ಕೆಗಾರರ ಕೃಪಾಕಟಾಕ್ಷ ಗಳಿಸುವಲ್ಲಿ ಯಶ ಕಂಡಿದ್ದಾರೆ.
ಶ್ರೀಲಂಕಾ ವಿರುದ್ಧ ಏಕದಿನ ಸರಣಿಗೆ ತಂಡ ಇಂತಿದೆ.
ಮಹೇಂದ್ರ ಸಿಂಗ್ ಧೋನಿ (ನಾಯಕ), ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ವಿರೇಂದ್ರ ಸೆಹ್ವಾಗ್, ಸುರೇಶ್ ರೈನಾ, ವಿರಾಟ್ ಕೊಹ್ಲಿ, ಗೌತಮ್ ಗಂಭೀರ್, ಹರ್ಭಜನ್ ಸಿಂಗ್, ಪ್ರಜ್ಞಾನ್ ಓಝಾ, ರೋಹಿತ್ ಶರ್ಮಾ, ಮುನಾಫ್ ಪಟೇಲ್, ಆರ್.ಪಿ.ಸಿಂಗ್, ಪಾರ್ಥೀವ್ ಪಟೇಲ್, ಜಹೀರ್ ಖಾನ್.
ಚಾಂಪಿಯನ್ ಸರಣಿಗೆ ತಂಡ ಇಂತಿದೆ
ಮಹೇಂದ್ರ ಸಿಂಗ್ ಧೋನಿ(ನಾಯಕ), ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್, ವಿರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ರೋಹಿತ್ ಶರ್ಮಾ, ಸುರೇಶ್ ರೈನಾ, ವಿರಾಟ್ ಕೊಹ್ಲಿ, ಇರ್ಪಾನ್ ಪಠಾಣ್ , ಪ್ರವೀಣ್ ಕುಮಾರ್ , ಹರ್ಭಜನ್ ಸಿಂಗ್, ಜಹೀರ್ ಖಾನ್, ಆರ್.ಪಿ.ಸಿಂಗ್, ಇಶಾಂತ್ ಶರ್ಮಾ, ಪ್ರಜ್ಞಾನ್ ಓಝಾ.
(ದಟ್ಸ್ ಕನ್ನಡ ಕ್ರೀಡಾವಾರ್ತೆ)












Click it and Unblock the Notifications