ಸಾಂಬಾ ಗೋಲಿಬಾರ್ ನ್ಯಾಯಾಂಗ ತನಿಖೆಗೆ ಆದೇಶ
ಜಮ್ಮು, ಆ. 6 : ಜಮ್ಮು ಕಾಶ್ಮೀರ ಸರ್ಕಾರವು ಇತ್ತೀಚೆಗೆ ಸಾಂಬಾ ಜಿಲ್ಲೆಯಲ್ಲಿ ನಡೆದ ಪೊಲೀಸ್ ಗೋಲಿಬಾರ್ ನಲ್ಲಿ ಇಬ್ಬರು ಮೃತಪಟ್ಟು 18 ಮಂದಿ ಗಾಯಗೊಂಡಿರುವ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದೆ.
ಅಮರನಾಥ್ ಭೂವಿವಾದ ರಾಜ್ಯಾದ್ಯಂತ ಭಾರಿ ಕೋಲಾಹಲ ಉಂಟು ಮಾಡಿದೆ. ಕನಿಷ್ಠ ಒಂದು ತಿಂಗಳಿನಿಂದ ಇಲ್ಲಿ ಪ್ರತಿಭಟನೆಗಳು, ಸಾವು ನೋವುಗಳು ಸಾಮಾನ್ಯವಾಗಿ ಬಿಟ್ಟವೆ. ಜಮ್ಮು, ರಾಜೋರಿ ಹಾಗೂ ಉಧಮ್ ಪುರ ಜಿಲ್ಲೆಗಳಲ್ಲಿ ಅವ್ಯಾಹತವಾಗಿ ಘರ್ಷಣೆಗಳು, ಕೋಮು ಗಲಭೆಗಳು, ದಾಂಧಲೆಗಳು ನಿರಾಂತಕವಾಗಿ ಮುಂದುವರೆದಿವೆ. ಪೊಲೀಸರು ಭಾರಿ ಬಿಗಿ ಭದ್ರತೆಯನ್ನು ಕೈಗೊಂಡರೂ ಪ್ರಯೋಜನವಾಗಿಲ್ಲ. ಕಾಂಗ್ರೆಸ್ ನೇತೃತ್ವದ ಗುಲಾಮ್ ನಬಿ ಅಜಾದ್ ಸರ್ಕಾರ ಅಮರನಾಥ್ ದೇವಾಲಯಕ್ಕೆ ಭೂಮಿ ನೀಡಿರುವ ಸಂಗತಿ ಹೋರಾಟಕ್ಕೆ ಕಾರಣವಾಗಿದೆ. ತೀವ್ರ ಟೀಕೆ ಬಂದ ಹಿನ್ನೆಲೆಯಲ್ಲಿ ಭೂಮಿಯನ್ನು ಸರ್ಕಾರ ವಾಪಸ್ಸು ಪಡೆದಿತ್ತು. ಪರ-ವಿರೋಧ ಪ್ರತಿಭಟನೆಗಳು ನಡೆಯುತ್ತಲೇ ಇವೆ.
ಇತ್ತೀಚೆಗೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಾಂಬಾ ಜಿಲ್ಲೆಯಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿತ್ತು. ನೂರಾರು ಕಾರ್ಯಕರ್ತರು ಪ್ರತಿಭಟನೆ ಜತೆಗೆ ಸಾರ್ವಜನಿಕರ ಅಸ್ತಿಪಾಸ್ತಿ ನಾಶ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಅವರ ಮೇಲೆ ಲಾಠಿ ಚಾರ್ಜ್ ನಡೆಸಿದ್ದರು. ಇದರಿಂದ ರೊಚ್ಚಿಗೆದ್ದಿದ್ದ ಪ್ರತಿಭಟನಾಕಾರರು ಪೊಲೀಸರು ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದರು. ಇದರಿಂದ ಕುಪಿತರಾದ ಪೊಲೀಸರು ಗೋಲಿಬಾರ್ ಮಾಡಿದ್ದರು. ಆಗ ಇಬ್ಬರು ಮತಪಟ್ಟು. 18 ಜನರು ಗಂಭೀರವಾಗಿ ಗಾಯಗೊಂಡಿದ್ದರು.
ಇದಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ಬುಧವಾರ ಸರ್ವಪಕ್ಷಗಳ ಸಭೆ ಕರೆದಿದ್ದಾರೆ.ಪರಿಸ್ಥಿತಿ ನಿಯಂತ್ರಿಸಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯ ಪೊಲೀಸ್, ಸಿಆರ್ ಪಿಎಫ್, ಮೀಸಲು ಪಡೆ, ಕಮಾಂಡೋ ಪಡೆಯ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದ್ದರೂ ಪ್ರತಿಭಟನೆಯನ್ನು ಕೊನೆಗೊಳಿಸುವಲ್ಲಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
