ಸಿಮಿ ನಿಷೇಧ ರದ್ದುಗೊಳಿಸಿದ ದೆಹಲಿ ಹೈಕೋರ್ಟ್
ನವದೆಹಲಿ, ಆ. 6 : ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಗೀತಾ ಮಿತ್ತಲ್ ನೇತೃತ್ವದ ವಿಶೇಷ ನ್ಯಾಯಮಂಡಳಿ ಸಿಮಿ(ಸ್ಟುಡೆಂಟ್ಸ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ) ಸಂಘಟನೆ ಮೇಲಿನ ನಿಷೇಧವನ್ನು ರದ್ದುಗೊಳಿಸಿದೆ.
ಗೃಹ ಸಚಿವಾಲಯ ನೀಡಿದ ದಾಖಲೆ ಸಿಮಿ ಸಂಘಟನೆ ಮೇಲೆ ನಿಷೇಧ ಹೇರುವಷ್ಟು ಬಲಿಷ್ಟವಾಗಿರಲಿಲ್ಲ. ಈ ಸಂಘಟನೆ ಭಯೋತ್ಪಾದಕ ಕಾರ್ಯದಲ್ಲಿ ತೊಡಗಿದೆ ಎನ್ನುವುದಕ್ಕೆ ಸಾಕ್ಷಿಗಳ ಕೊರತೆಯಿದೆ ಎಂದು ನ್ಯಾಯಮಂಡಳಿಯೂ ಸಚಿವಾಲಯಕ್ಕೆ ಹಸ್ತಾಂತರಿಸಿದ ಮುಚ್ಚಿದ ಲಕೋಟೆಯಲ್ಲಿ ತಿಳಿಸಿದ್ದಾರೆ. ಫೆಬ್ರುವರಿ 7 ರಿಂದ ಎರಡು ವರ್ಷಗಳ ಕಾಲ ಅನ್ವಯವಾಗುವಂತೆ ಕೇಂದ್ರ ಸರ್ಕಾರ ತನ್ನ ಮೇಲೆ ಹೇರಿದ್ದ ನಿಷೇಧವನ್ನು ಪ್ರಶ್ನಿಸಿ ಸಿಮಿ ಸಂಘಟನೆ ಕೋರ್ಟ್ ಮೊರೆ ಹೋಗಿತ್ತು.
ಇದೇ ವೇಳೆ, ಹೈಕೋರ್ಟ್ ತೀರ್ಪನ ವಿರುದ್ಧ ಸುಪ್ರಿಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಮತೀಯ ಸಂಘರ್ಷ ಹಬ್ಬಿಸುವ ಚಟುವಟಿಕೆಗಳಲ್ಲಿ ಸಿಮಿ ಸಂಘಟನೆ ಪಾಲ್ಗೊಂಡಿರುವ ಬಗ್ಗೆ ಸಾಕ್ಷಿಗಳು ದೊರೆತ ಬಳಿಕ ಕೇಂದ್ರ ಸರ್ಕಾರ ಅದನ್ನು 2001ರಲ್ಲಿ ನಿಷೇಧಿಸಿತ್ತು. ಆ ಬಳಿಕ ನಿಷೇಧವನ್ನು ಎರಡು ವರ್ಷಗಳಿಗೊಮ್ಮೆ ವಿಸ್ತರಣೆ ಮಾಡಲಾಗುತ್ತಿತ್ತು. ಕಳೆದ ಫೆ. 7ರಂದು ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿ, ನಿಷೇಧವನ್ನು 2010ರ ವರೆಗೆ ವಿಸ್ತರಿಸಿತ್ತು.
ಕೇಂದ್ರ ಸರ್ಕಾರವು 2006ರಲ್ಲಿ ಮಹಾರಾಷ್ಟ್ರದ ಮಾಲೆಗಾಂವ್ ನಲ್ಲಿ ನಡೆದಿದ್ದ ಸ್ಫೋಟ ಪ್ರಕರಣವನ್ನು ಉಲ್ಲೇಖಿಸಿ ಸಿಮಿ ಸಂಘಟನೆಯನ್ನು ನಿಷೇಧಿಸಬೇಕು ಎಂದು ವಾದಿಸಿದೆ. ಆದರೆ ಈ ಸಂಘಟನೆಯನ್ನು ನಿಷೇಧಿಸಲು ಬಲವಾದ ಸಾಕ್ಷಿಗಳನ್ನು ಸಲ್ಲಿಸಿಲ್ಲ ಎಂದು ನ್ಯಾಯಮಂಡಳಿ ಹೇಳಿದೆ.
(ಏಜೆನ್ಸೀಸ್)


Click it and Unblock the Notifications
