ಬಸ್ ದರ ಹೆಚ್ಚಳ : ಸರ್ಕಾರದ ಮುನ್ಸೂಚನೆ
ಬೆಂಗಳೂರು, ಆ. 2 : ರಾಜ್ಯ ರಸ್ತೆ ಸಾರಿಗೆ ಬಸ್ ದರವನ್ನು ಹೆಚ್ಚಿಸುವ ಮುನ್ಸೂಚನೆಯನ್ನು ಸರ್ಕಾರ ನೀಡಿದೆ. ಹಣದುಬ್ಬರದಿಂದಾಗಿ ಡೀಸೆಲ್ ಬೆಲೆ ತೀವ್ರ ಏರಿರುವುದರಿಂದ ದರ ಹೆಚ್ಚಿಸದೇ ಗತ್ಯಂತರವಿಲ್ಲ ಎಂದು ಹೇಳಿದೆ.
ರಾಜ್ಯದಲ್ಲಿ ಡೀಸೆಲ್ ಕೊರತೆ ತೀವ್ರವಾಗಿ ಕಾಡುತ್ತಿದೆ. ಕೇಂದ್ರ ಸರ್ಕಾರ ಕೂಡ ಡೀಸೆಲ್ ದರ ಹೆಚ್ಚಿಸಿರುವುದರಿಂದ ರಾಜ್ಯ ಸಾರಿಗೆ ಸಂಸ್ಥೆ ವಾರ್ಷಿಕ150 ಕೋಟಿ ರು.ಯಷ್ಟು ನಷ್ಟ ಅನುಭವಿಸುತ್ತಿದೆ. ನಷ್ಟ ತುಂಬಿಕೊಳ್ಳಲು ಸಾರ್ವಜನಿಕರ ಮೇಲೆ ದರ ಏರಿಕೆಯ ಹೊರೆ ಹೇರಲೇಬೇಕಾಗಿದೆ ಎಂದು ಸಾರಿಗೆ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೊಡನೆ ಚರ್ಚಸಿ ನಂತರ ತೀರ್ಮಾನ ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದಾರೆ. ಸಿಬ್ಬಂದಿಗಳ ವೇತನ ಕೂಡ ಹೆಚ್ಚಿಸಬೇಕಾಗಿದೆ. ಬಸ್ ಬಿಡಿಭಾಗಗಳ ಬೆಲೆಯಲ್ಲಿ ಕೂಡ ತೀವ್ರ ಏರಿಕೆ ಕಂಡುಬಂದಿದೆ. ಇದರಿಂದಾಗಿ ದರ ಏರಿಸುವ ತೀರ್ಮಾನಕ್ಕೆ ಬರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಸಿದಾಗ ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಸುವುದಿಲ್ಲ, ಹೊರೆಯನ್ನು ತಾನೇ ಹೊರುವುದಾಗಿ ತಿಳಿಸಿತ್ತು. ಆದರೆ, ಈಗ ಬಸ್ ದರ ಏರಿಸುವ ಮುನ್ಸೂಚನೆ ನೀಡಿ ಸಾರ್ವಜನಿಕರಿಗೆ ಶಾಕ್ ನೀಡಲು ಸಜ್ಜಾಗಿದೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
