ದ್ವಿಶತಕ ಸಿಡಿಸಿದ ಸೆಹ್ವಾಗ್, 329ಕ್ಕೆ ಭಾರತ ಆಲೌಟ್
ಗಾಲೆ, ಆ.1 : ಭಾರತ ತಂಡದ ಭರವಸೆ ಬ್ಯಾಟ್ಸ್ ಮನ್ ವಿರೇಂದ್ರ ಸೆಹ್ವಾಗ್ ಅವರ ವಿರೋಚಿತ ದ್ವಿಶತಕ ಸಿಡಿಸಿದ್ದು, ಶ್ರೀಲಂಕಾ ವಿರುದ್ಧ ಇಲ್ಲಿ ನಡೆಯುತ್ತಿರುವ ದ್ವೀತಿಯ ಟೆಸ್ಟ್ ಪಂದ್ಯದಲ್ಲಿ 329 ರನ್ ಗಳಿಸುವುದರೊಂದಿಗೆ ಭಾರತ ಗೌರವಾನ್ವಿತ ಮೊತ್ತ ತಲುಪಲು ಕಾರಣರಾದರು. ಕೊನೆಯಲ್ಲಿ ಇಶಾಂತ್ ಶರ್ಮಾ ಅವರ ವಿಕೆಟ್ ಉರುಳಿಸುವ ಮೂಲಕ 329ರನ್ ಗಳಿಗೆ ಭಾರತವನ್ನು ಕಟ್ಟಿಹಾಕಲು ಸಿಂಹಳಿಯ ಬೌಲರ್ ಗಳು ಯಶಸ್ವಿಯಾದರು.
ಭಾರತೀಯ ತಂಡದ ಉಪನಾಯಕ ವಿರೇಂದ್ರ ಸೆಹ್ವಾಗ್ ಅವರ ಆಕರ್ಷಕ ದ್ವಿಶತಕದೊಂದಿಗೆ ಟೆಸ್ಟ್ ಕ್ರಿಕೆಟ್ ನಲ್ಲಿ 5 ಸಾವಿರ ರನ್ ಗಳಿಸಿದೆ ಬ್ಯಾಟ್ಸ್ ಮನ್ ಗಳ ಪಟ್ಟಿಗೆ ಸೇರ್ಪಡೆಯಾದರು. 227 ಬೌಲ್ ಗಳನ್ನು ಎದುರಿಸಿದ ಅವರು 22 ಬೌಂಡರಿ ಹಾಗೂ 4 ಆಕರ್ಷಕ ಸಿಕ್ಸರ್ ಗಳೊಂದಿಗೆ 201 ರನ್ ಗಳಿಸಿ ಅಜೇಯರಾಗಿ ಉಳಿದರು. ಒಂದಡೆ ಸಿಂಹಳಿಯರ ದಾಳಿಯನ್ನು ಎದುರಿಸಲಾಗದೆ ಭಾರತೀಯ ಘಟಾನುಘಟಿ ದಾಂಡಿಗರು ಪೆವಿಲಿಯನ್ ದಾರಿ ಹಿಡಿಯುತ್ತಿದ್ದರೆ, ಇನ್ನೊಂದಡೆ ಸೆಹ್ವಾಗ್ ಕ್ರೀಸ್ ಬಳಿ ಗಟ್ಟಿಯಾಗಿ ನಿಂತು ತಂಡದ ಮೊತ್ತವನ್ನು ನಿಧಾನಗತಿವಾಗಿ ಹೆಚ್ಚಿಸತೊಡಗಿದರು.
ಐದನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ವಿವಿಎಸ್ ಲಕ್ಷ್ಮಣ್ ಉತ್ತಮ ಜೊತೆಯಾಟ ನೀಡುವ ಎಲ್ಲ ಲಕ್ಷಣಗಳು ಕಂಡು ಬಂದಿದ್ದವು. ಆದರೆ ಲಂಕಾದ ಭರವಸೆಯ ಯುವ ಬೌಲರ್ ಅಜಂತಾ ಮೆಂಡೀಸ್ ಅವರ ಮಾರಕ ದಾಳಿಗೆ ವಿಕೆಟ್ ಒಪ್ಪಿಸಿ ಹೊರನಡೆದರು. ನಂತರ ಬಂದ ದಿನೇಶ್ ಕಾರ್ತೀಕ್, ನಾಯಕ ಅನಿಲ್ ಕುಂಬ್ಳೆ, ಇಶಾಂತ್ ಶರ್ಮಾ ಬಂದ ದಾರಿಗೆ ಸುಂಕವಿಲ್ಲದಂತೆ ಪೆವಿಲಿಯನ್ ಸೇರಿಕೊಂಡರು. ಮೊದಲ ದಿನದಲ್ಲಿ ಭಾರತ ಗುರುವಾರ 4 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಸೆಹ್ವಾಗ್ ಮತ್ತು ಸ್ವಲ್ಪ ಪ್ರತಿರೋಧ ತೋರಿದ ಲಕ್ಷ್ಮಣ್ ಬಿಟ್ಟರೆ ಭಾರತದ ಯಾವ ಆಟಗಾರ ಜವಾಬ್ದಾರಿಯುತ ಪ್ರದರ್ಶನ ನೀಡಲಿಲ್ಲ. ಖ್ಯಾತ ಬೌಲರ್ ಮುತ್ತಯ್ಯ ಮುರಲೀಧರನ್ ಮತ್ತು ಯುವ ಬೌಲರ್ ಅಜಂತಾ ಮೆಂಡೀಸ್ ತಮ್ಮ ಕರಾರುವಕ್ಕಾದ ಬೌಲಿಂಗ್ ಮೂಲಕ ಭಾರತವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿದರು.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
