ರೀಮೇಕ್ ಚಿತ್ರಗಳಿಗೆ ತೆರಿಗೆ ವಿನಾಯಿತಿಗೆ ವಿರೋಧ
ಬೆಂಗಳೂರು, ಜು.31: ಕರ್ನಾಟಕ ಸರ್ಕಾರ ರೀಮೇಕ್ ಚಿತ್ರಗಳಿಗೆ ತೆರಿಗೆ ವಿನಾಯಿತಿ ನೀಡಿರುವುದನ್ನು ಪ್ರೊ.ಚಂದ್ರಶೇಖರ ಕಂಬಾರ(ಕಾಂಗ್ರೆಸ್) ವಿಧಾನ ಪರಿಷತ್ ಅಧಿವೇಶನದಲ್ಲಿ ತೀವ್ರವಾಗಿ ವಿರೋಧಿಸಿದ್ದಾರೆ.
ಪರಿಷತ್ ಅಧಿವೇಷದಲ್ಲಿ 2008-09ನೇ ಸಾಲಿನ ಮುಂಗಡ ಪತ್ರದ ಚರ್ಚೆಯಲ್ಲಿ ಮಾತನಾಡುತ್ತಿದ್ದ ಕಂಬಾರರು, ರೀಮೇಕ್ ಚಿತ್ರಗಳಿಗೆ ಮನರಂಜನೆ ತೆರಿಗೆಯಿಂದ ವಿನಾಯಿತಿ ನೀಡುರುವುದನ್ನು ಸರ್ಕಾರ ಈ ತಕ್ಷಣ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ರೀಮೇಕ್ ಚಿತ್ರಗಳಿಗೆ ತೆರಿಗೆ ನೀಡುವುದರಿಂದ ಉತ್ತಮ ಚಿತ್ರಗಳನ್ನು ನಿರ್ಮಿಸಲು ಸಾಧ್ಯವಾಗುವುದಿಲ್ಲ.ಇದು ಕಳಪೆ ಮಟ್ಟದ ಚಿತ್ರಗಳ ನಿರ್ಮಾಣಕ್ಕೆ ದಾರಿ ತೆಗೆಯುತ್ತದೆ. ಸೃಜನಾತ್ಮಕತೆ ಹಾಗೂ ಸಹಜತೆಯಿಲ್ಲದ ಚಿತ್ರಗಳು ನಿರ್ಮಾಣವಾಗುತ್ತವೆ ಎಂದರು.
ಸರ್ಕಾರದ ಈ ಧೋರಣೆಯಿಂದ ಅರ್ಧದಷ್ಟು ಬಂಡವಾಳವನ್ನು ನಿರ್ಮಾಪಕರು ಹೂಡಿರೆ ಇನ್ನರ್ಧ ಬಂಡವಾಳ ಸರ್ಕಾರದ ತೆರಿಗೆ ವಿನಾಯಿತಿಯಿಂದ ಸಿಗುತ್ತದೆ ಎಂಬ ಕಾರಣಕ್ಕೆ ರೀಮೇಕ್ ಚಿತ್ರಗಳ ನಿರ್ಮಾಣ ಅಧಿಕವಾಗುತ್ತದೆ ಎಂದರು. ಕಂಬಾರ ಈ ಬೇಡಿಕೆಯನ್ನು ದೊಡ್ಡರಂಗೇಗೌಡ(ಕಾಂಗ್ರೆಸ್) ಬೆಂಬಲಿಸಿದರು. ರೀಮೇಕ್ ಎನ್ನುವುದು ಒಂದು ಕಾಯಿಲೆ ಇದ್ದಂತೆ. ಇದನ್ನು ಆದಷ್ಟು ಬೇಗ ಗುಣಪಡಿಸದೇ ಹೋದರೆ ಇದು ಸಾಂಕ್ರಾಮಿಕ ಜಾಡ್ಯದಂತೆ ವಿಸ್ತರಿಸುತ್ತದೆ ಎಂದರು. ಕನ್ನಡ ಚಿತ್ರೋದ್ಯಮದಲ್ಲಿ ಉತ್ತಮ ಬರಹಗಾರರಿದ್ದಾರೆ. ಚಿತ್ರ ನಿರ್ಮಾಣಕ್ಕೆ ಅಗತ್ಯವಾದ ಉತ್ತಮ ಚಿತ್ರಕತೆಗಳನ್ನು ಕೊಡಲು ಸಿದ್ಧವಿದ್ದಾರೆ. ರೀಮೇಕ್ ಚಿತ್ರಗಳು ಕನ್ನಡದ ಶ್ರೀಮಂತ ಸಂಸ್ಕೃತಿಯನ್ನು ಕಾಪಾಡುವುದಿಲ್ಲ ದೊಡ್ಡರಂಗೇಗೌಡ ಹೇಳಿದರು.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications