ಹಾಲು ಖರೀದಿ ದರ ಇಳಿಕೆ; ರೈತರಿಗೆ ಹೆಚ್ಚಾದ ಸಂತಸ
ಬೆಂಗಳೂರು, ಜು.29: ಸರ್ಕಾರ ಹಾಲು ಉತ್ಪಾದಕರಿಗೆ 2 ರು. ಪ್ರೋತ್ಸಾಹ ಧನ ಪ್ರಕಟಿಸಿದ ಬೆನ್ನಲ್ಲೇ ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ ಪ್ರತಿ ಲೀಟರ್ ಹಾಲಿನ ಖರೀದಿ ದರ 75 ಪೈಸೆಗಳಷ್ಟು ಇಳಿಸಿದೆ.
ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೆ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ ಪ್ರತಿ ಲೀಟರ್ ಹಾಲಿಗೆ 2 ರು.ಗಳ ಪ್ರೋತ್ಸಾಹ ಧನ ಪ್ರಕಟಿಸಿತು. ಜನವರಿಯಲ್ಲಿ ಹಾಲಿನ ಖರೀದಿ ದರವನ್ನು 13.25 ರು.ಗಳಿಗೆ ಹೆಚ್ಚಿಸಿ ಗ್ರಾಹಕರ ಮಾರಾಟ ದರವನ್ನು 16 ರು.ಗಳಿಗೆ ಪರಿಷ್ಕರಿಸಿತ್ತು. ಈಗ ಹಾಲಿನ ಖರೀದಿ ದರವನ್ನು 12.50ರು.ಗಳಿಗೆ ಇಳಿಕೆ ಮಾಡಿದೆ. ಆದರೆ ಗ್ರಾಹಕ ಮಾರಾಟ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಹಾಲು ಉತ್ಪಾದನೆ ಹೆಚ್ಚಳದ ಉದ್ದೇಶದಿಂದ ಹಾಲಿನ ಖರೀದಿ ದರವನ್ನ್ನು ಕಡಿಮೆ ಮಾಡಲಾಗಿದೆ ಎಂದು ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ ತಿಳಿಸಿದೆ. ಪ್ರತಿ ವರ್ಷ ಹಾಲು ಉತ್ಪಾದನೆ ಇಳಿಕೆಯಾಗುತ್ತಿರುವುದು, ಮೇವು ಅಭಾವ, ಪಶು ಆಹಾರದ ಬೆಲೆ ಹೆಚ್ಚಳದ ನೆಪವೊಡ್ಡಿ ಹಾಲಿನ ಖರೀದಿ ದರವನ್ನು ಏರಿಸಲಾಗುತ್ತಿತ್ತು.ಆದರೆ ಈಗ ಸರ್ಕಾರ ಹಾಗೂ ಒಕ್ಕೂಟದ ಕೊಡುಗೆಯಿಂದ ಹಾಲು ಉತ್ಪಾದಕರಿಗೆ ಹಾಲು ಜೇನು ಸವಿದಂತಾಗಿದೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications