ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ನಿಗ್ರಹಕ್ಕೆ ಕೋಕಾ ಕಾಯ್ದೆ ಅಗತ್ಯ: ಬಿಎಸ್‌ವೈ

By Staff
|
Google Oneindia Kannada News

ಬೆಂಗಳೂರು, ಜು. 28 : ಉಗ್ರರ ದಾಳಿಯನ್ನು ತಡೆಗಟ್ಟಲು ಮಹಾರಾಷ್ಟ್ರ ಸರ್ಕಾರ ತಂದಿರುವ ಮೋಕಾ ಕಾಯ್ದೆಯಂತೆ ಕರ್ನಾಟದಲ್ಲಿಯೂ ಕೋಕಾ ಕಾಯ್ದೆಯಂತಹ ಪ್ರತ್ಯೇಕ ಕಾನೂನನ್ನು ಜಾರಿಗೆ ತರಲು ರಾಷ್ಟ್ರಪತಿಗಳು ಶೀಘ್ರದಲ್ಲಿ ಅನುಮತಿ ನೀಡಬೇಕು. ಈ ಮೂಲಕ ರಾಜ್ಯಗಳಿಗೆ ಮತ್ತಷ್ಟು ಬಲ ಬರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಇತ್ತೀಚೆಗೆ ರಾಜ್ಯದಲ್ಲಿ ಉಗ್ರರ ಹಾವಳಿ ಹೆಚ್ಚಾಗಿದ್ದು, ಉಗ್ರರನ್ನು ನಿಗ್ರಹಿಸುವ ವಿಶೇಷ ಕಾಯ್ದೆ (ಕೋಕಾ) ಅನಿವಾರ್ಯ ಎಂದರು. ಪ್ರಶಾಂತವಾಗಿರುವ ರಾಜ್ಯವನ್ನು ಉಗ್ರರು ಅಡಗುತಾಣ ಮಾಡಿಕೊಂಡಿದ್ದಾರೆ. ಇದನ್ನು ತಡೆಗಟ್ಟಲು ಕೋಕಾ ಕಾಯ್ದೆ ಜಾರಿಗೊಳಿಸಿ ಎಂದು ಕಳೆದ ಆರು ತಿಂಗಳ ಹಿಂದೆಯೇ ರಾಷ್ಟ್ರಪತಿಯವರಿಗೆ ಮನವಿ ಮಾಡಿಕೊಳ್ಳಲಾಗಿದೆ, ಆದರೆ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಮೂಗು ತೂರಿಸುತ್ತಿರುವ ಪರಿಣಾಮ ಕಾನೂನು ಜಾರಿಗೆ ಹಿನ್ನಡೆಯಾಗಿದೆ. ಆದ್ದರಿಂದ ಎಲ್ಲ ರಾಜ್ಯಗಳೂ ಇಂಥ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರದಲ್ಲಿ ಯುಪಿಎ ಸರ್ಕಾರ ಆಡಳಿತಕ್ಕೆ ಬಂದ ನಂತರ ಫೋಟಾ ಕಾಯ್ದೆ ರದ್ದುಪಡಿಸಿತು. ಅಲ್ಲಿಂದ ಉಗ್ರ ಹಾವಳಿ ಹೆಚ್ಚಾಗಿದೆ ಎಂದು ಆರೋಪಿಸಿದ ಯಡಿಯೂರಪ್ಪ, ದೇಶಕ್ಕೆ ಅಪಾಯ ಒದಗಿರುವ ಹಿನ್ನಲೆಯಲ್ಲಿ ಇಂಥ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಕಠಿಣ ಕಾನೂನು ಜಾರಿಯಾದರೆ ತಕ್ಕ ಮಟ್ಟಿಗೆ ತಡೆಗಟ್ಟಬಹುದು ಎಂದು ಹೇಳಿದರು.

ಬೆಂಗಳೂರಿನಲ್ಲಿ ನಡೆದ ಉಗ್ರರ ವಿಧ್ವಂಸಕ ಕೃತ್ಯದ ಎಲ್ಲ ವರದಿಯನ್ನು ಪ್ರಧಾನಮಂತ್ರಿ ಅವರ ಗಮನಕ್ಕೆ ತರಲಾಗಿದೆ ಎಂದ ಅವರು, ದೇಶದಲ್ಲಿ ಆತಂಕಕಾರಿ ಬೆಳವಣಿಗೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಪ್ರತಿ ಗಂಟೆಗೊಮ್ಮೆ ಹೆಚ್ಚಿನ ವರದಿಗಳನ್ನು ತರಿಸಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಯಡಿಯೂರಪ್ಪ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X