ಹುಟ್ಟೂರಿನಲ್ಲೇ ನಿರ್ಲಕ್ಷ್ಯಕ್ಕೆ ಒಳಗಾದ ಬಸವಣ್ಣ
ಬಿಜಾಪುರ, ಜು. 14 : ಹನ್ನೆರಡನೇ ಶತಮಾನದ ಶಿವಶರಣ, ಸಮಾಜ ಸುಧಾರಕ ಬಸವಣ್ಣನ ಕುರಿತಾದ ವಿವಾದಾತ್ಮಕ ಸುದ್ದಿಗಳು ಬೆಳಕಿಗೆ ಬರುತ್ತಲೇ ಇವೆ. ಅನೇಕ ಗೊಂದಲಗಳನ್ನು ಹುಟ್ಟುಹಾಕುತ್ತಲೇ ಇವೆ. ಈ ಎಲ್ಲದರ ನಡುವೆ ಬಸವಣ್ಣನ ಹುಟ್ಟೂರಾದ ಬಸವನಬಾಗೇವಾಡಿಯ ಪ್ರಮುಖ ವೃತ್ತದಲ್ಲಿ ಪ್ರತಿಷ್ಠಾಪಿಸಲಾದ ಪುತ್ಥಳಿ ಉದ್ಘಾಟನೆಗೊಳ್ಳದೆ ಅನಾಥವಾಗಿ ಉಳಿದಿದೆ.
ಪಟ್ಟಣದ ಮುಖ್ಯ ವೃತ್ತದಲ್ಲಿ ಬಸವಣ್ಣನವರ ಮೂರ್ತಿಯನ್ನು ಕಳೆದ ನಾಲ್ಕು ವರ್ಷಗಳ ಹಿಂದಯೇ ಸ್ಥಾಪಿಸಲು ನಿರ್ಧರಿಸಲಾಗಿದೆ. ಸುಮಾರು 26 ಲಕ್ಷ ರುಪಾಯಿಗಳನ್ನು ಖರ್ಚು ಮಾಡಿ ಈ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ಆದರೆ ಬವಸಣ್ಣನ ಪ್ರತಿಮೆಯ ಎಲ್ಲ ಕೆಲಸ ಮುಗಿದಿದ್ದರೂ ಅದಕ್ಕೆ ಬಟ್ಟೆ ಸುತ್ತಿ ಅವಮಾನ ಮಾಡಲಾಗುತ್ತಿದೆ. ಹೀಗೆ ಅನಾಥವಾಗಿ ಅವಮಾನ ಅನುಭವಿಸುತ್ತಿರುವ ಬಸವಣ್ಣನ ಪ್ರತಿಮೆ ಶೀಘ್ರದಲ್ಲಿ ಉದ್ಘಾಟನೆಯಾಗಬೇಕು ಎನ್ನುವುದು ಬಸವ ಅಭಿಮಾನಿಗಳ ಒತ್ತಾಯವಾಗಿದೆ.
ಭಕ್ತಿ ಭಂಡಾರಿ ಬಸವಣ್ಣನ ಮೂರ್ತಿ ಸ್ಥಾಪನೆ ಮಾಡಿ ಸುಮಾರು ನಾಲ್ಕು ವರ್ಷಗಳೇ ಉರುಳಿವೆ. ಆದರೂ ಇನ್ನೂ ಉದ್ಘಾಟನೆ ಭಾಗ್ಯ ದೊರತಿಲ್ಲ. ಇದು ತುಂಬಾ ನೋವಿನ ಸಂಗತಿ. ಆದ್ದರಿಂದ ಸಂಬಂಧಪಟ್ಟವರು ಶೀಘ್ರದಲ್ಲಿ ಇತ್ತ ಗಮನ ಹರಿಸಿ ಕಾಯಕ ಯೋಗಿಯ ಪ್ರತಿಮೆಯನ್ನು ಅನಾವರಣಗೊಳಿಸಿದರೆ ಸಾಕು ಎಂದು ಸ್ಥಳೀಯ ನಾಗರಿಕರು ಬೇಸರದಿಂದ ಹೇಳುತ್ತಾರೆ. ಒಟ್ಟಿನಲ್ಲಿ ಜನಪ್ರತಿನಿಧಿಗಳು ನಿರ್ಲಕ್ಷ್ಯದಿಂದ ಬಸವಣ್ಣನ ಮೂರ್ತಿ ಅನಾಥವಾಗಿರುವುದಂತೂ ಸತ್ಯ. ಸರ್ಕಾರ ಕೂಡಲೇ ಮೂರ್ತಿ ಉದ್ಘಾಟನೆಗೆ ಮುಂದಾಗಬೇಕು ಎನ್ನುವುದು ಸ್ಥಳೀಯ ಕೂಗಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಜಗಜ್ಯೋತಿ ಬಸವಣ್ಣನ ಮೂಲ ಯಾವುದು?


Click it and Unblock the Notifications
