ಕಾಂಗ್ರೆಸ್ ಗೆ ಟಾಟಾ, ಬಿಜೆಪಿಗೆ ಬರ್ಲಾ: ಜಗ್ಗೇಶ್
ನವರಸನಾಯಕ ಜಗ್ಗೇಶ್ ತುರುವೇಕೆರೆ ಕಾಂಗ್ರೆಸ್ ಪಕ್ಷದ ಶಾಸಕ ಸ್ಥಾನಕ್ಕೆ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಕಳೆದ ಎರಡು ಬಾರಿ ಸೋತು ಸುಣ್ಣವಾಗಿದ್ದ ಜಗ್ಗೇಶ್ ಅವರನ್ನು ಇತ್ತೀಚಿನ ಚುನಾವಣೆಯಲ್ಲಿ ಜನ ಅವರ ಕೈಬಿಡಲಿಲ್ಲ. ಅನುಕಂಪವೋ, ಅಭಿಮಾನವೋ ಗೊತ್ತಿಲ್ಲ. ರಾಜ್ಯದ ತುಂಬೆಲ್ಲಾ ಬಿಜೆಪಿ ಜಯಭೇರಿ ಬಾರಿಸುತ್ತಿರುವ ಸುದ್ದಿ ಎಲ್ಲೆಡೆ ಬಿತ್ತರವಾಗುತ್ತಿದ್ದರೂ ತುರುವೇಕೆರೆ ಜನ ಮಾತ್ರ ನಿರ್ಧಾರ ಮಾಡಿದಂತಿತ್ತು. ಜಗ್ಗೇಶ್ ಅವರ ಕನಸು ಕೈಗೊಡಿತ್ತು. ಶಾಸಕನಾಗಬೇಕು ಎನ್ನುವ ಅವರ ಬಹುದಿನದ ಹಂಬಲ ಈಡೇರಿತ್ತು. ಶಾಸನಸಭೆ ಪ್ರವೇಶಿಸುವ ಅರ್ಹತೆಯನ್ನು ಪಡೆದುಕೊಂಡಿದ್ದರು.
*ಮೃತ್ಯುಂಜಯ ಕಲ್ಮಠ
ಆದರೆ ಆರಿಸಿ ಬಂದು ಇನ್ನು ಎರಡು ತಿಂಗಳು ಕಳೆದಿಲ್ಲ. ಜತನದಿಂದ ಕಾಪಾಡಿಕೊಳ್ಳಬೇಕಿದ್ದ ಶಾಸಕ ಸ್ಥಾನಕ್ಕೆ ಆಗಲೇ ಜಗ್ಗೇಶ್ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಅಲ್ಲಿಯ ಜನಕ್ಕೆ ಮೋಸ ಮಾಡಿದ್ದಾರೆ ಎನ್ನುವ ಕೂಗು ಕೇಳಿಬಂದಿದೆ. ಪ್ರತಿಭಟನೆ ಮೂಲಕ ಅಲ್ಲಿನ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ಖಂಡಿಸಿ ಜು.16 ರಂದು ಮಾಜಿ ಸಂಸದ ಜಿ.ಎಸ್.ಬಸವರಾಜು ನೇತೃತ್ವದಲ್ಲಿ ತುರುವೇಕೆರೆ ಬಂದ್ ಕೂಡಾ ನಡೆಸಲು ತಿರ್ಮಾನಿಸಿರುವ ಸುದ್ದಿ ಇದೆ. ಇದೆಲ್ಲಾ ಜಗ್ಗೇಶ್ ಅವರಿಗೆ ಬೇಕಿತ್ತಾ ಅನ್ನುವ ಪ್ರಶ್ನೆ ಕಾಡತೊಡಗುತ್ತದೆ.
ರಾಜೀನಾಮೆಗೆ ಕಾರಣವೆನೆಂದರೆ ಕಾಂಗ್ರೆಸ್ ಪಕ್ಷದಲ್ಲಿದ್ದರೆ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಆದ್ದರಿಂದ ಯಡಿಯೂರಪ್ಪ ಅವರು ಜತೆಗಿದ್ದರೆ ಭಾರಿ ಅಭಿವೃದ್ಧಿ ನಿರೀಕ್ಷಿಸಬಹುದು ಎನ್ನುವ ಸಮಜಾಯಿಸಿ ಜಗ್ಗೇಶ್ ಅವರದು. ಸಿನಿಮಾ ರಂಗದಲ್ಲಿ ಉತ್ತಮ ಕಲಾವಿದ ಎಂದು ನಿರೂಪಿಸಿರುವ ಇವರು, ತಮ್ಮದಲ್ಲದ ಕ್ಷೇತ್ರದಲ್ಲಿಯೂ ಕೂಡಾ ನಾನೇನು ಕಮ್ಮಿಯಲ್ಲ ಎಂದು ಸಾಬೀತುಪಡಿಸಿದ್ದಾರೆ. ಯಾರು ಏನೇ ಹೇಳಿದರೂ ನಾನು ಇಲ್ಲಿರಲು ಸಾಧ್ಯವಿಲ್ಲ. ಇನ್ನೂ 15 ವರ್ಷ ಕಳೆದರೂ ಈ ಪಕ್ಷ ಉದ್ಧಾರವಾಗಲ್ಲ, ಕಾಂಗ್ರೆಸ್ ನಲ್ಲಿ ನಾಯಕರೇ ಇಲ್ಲ. ಬರೀ ಕಾಲೆಳೆಯುವ ಜನರೇ ತುಂಬಿಕೊಂಡಿದ್ದಾರೆ ಇವು ಜಗ್ಗೇಶ್ ಅವರ ಆರೋಪ ಮತ್ತು ಉತ್ತರಗಳು.
ತುರುವೇಕೆರೆ ಜನ ಮಾತ್ರ ತೀವ್ರ ಅಸಮಾಧಾನಗೊಂಡಿರುವುದು ಸತ್ಯ. ಕಾಂಗ್ರೆಸ್ ಪದಾಧಿಕಾರಿಗಳು ಪರಿಪರಿಯಾಗಿ ಜಗ್ಗೇಶ್ ಅವರಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಆದರೆ ಬಿಜೆಪಿ ಸೇರಿದರೆ ಸ್ಥಾನಮಾನ ಆಮಿಷಕ್ಕೆ ಒಳಗಾಗಿರುವ ಜಗ್ಗೇಶ್ ಯಾರಿಗೂ ಸೊಪ್ಪು ಹಾಕದೇ ನೇರವಾಗಿ ಕಮಲದ ಮನೆಗೆ ಕಾಲಿಟ್ಟಿದ್ದಾರೆ. ವೃತ್ತಿಪರ ರಾಜಕಾರಣಿಗಳಿಗಿಂತ ನಟರಾದ ನಾವೇನೂ ಕಡಿಮೆ ಇಲ್ಲ ಎಂಬುದನ್ನು ಜಗ್ಗೇಶ್ ಸಾಬೀತು ಪಡಿಸಿದ್ದಾರೆ.
ವಿಧಾನಸೌಧಕ್ಕೆ ಕಾಲಿಟ್ಟರೆ ಜನ ಈ ರೀತಿ ವರ್ತಿಸುತ್ತಾರೂ ಏನೋ ಗೊತ್ತಿಲ್ಲ. ನಿನ್ನೆ ಮೊನ್ನೆಯ ವರೆಗೆ ಜಗ್ಗೇಶ್ ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಬಡಬಡಿಸಿದ್ದರು. ಕಿರುತೆರೆ ಸಂದರ್ಶನವೊಂದರಲ್ಲಿ ಪಕ್ಷಾಂತರವನ್ನು ಸ್ಪಷ್ಟವಾಗಿ ಅಲ್ಲಗಳೆದಿದ್ದರು. ಇದೀಗ ಅದೆಲ್ಲಕ್ಕೂ ತಿಲಾಂಜಲಿ ನೀಡಿದ್ದಾರೆ. ಇಂದಿನ ಕಾಲದಲ್ಲಿ ತತ್ವ ಸಿದ್ಧಾಂತಕ್ಕೆ ಬೆಲೆ ಇಲ್ಲ ಅನ್ನುವುದು ಅವರಿಗೆ ಗೊತ್ತಿದೆ. ಗಾಳಿ ಬಿಟ್ಟಾಗ ತೋರಿಕೋ ಅನ್ನುವ ನಿಲುವಿಗೆ ಸಿದ್ಧರಾಗಿದ್ದಾರೆ. ಒಂದರ್ಥದಲ್ಲಿ ಇದು ಕೂಡಾ ಸರಿ ಅಂತ ಅನ್ನಿಸುತ್ತೆ. ಏನಾದರಾಗಲಿ ಆರಿಸಿ ಕಳಿಸಿದವರನ್ನು ಮರೆತರೆ ಪರಿಣಾಮ ಎನಾಗುತ್ತದೆ ಎನ್ನುವುದು ಶಶಿಕುಮಾರ್ ಮತ್ತು ಅನಂತನಾಗ್ ಅವರನ್ನು ನೋಡಿ ಜಗ್ಗೇಶ ಕಲಿಯಬೇಕಿದೆ. ಕಾಂಗ್ರೆಸ್ ಆಗಲೀ, ಬಿಜೆಪಿ ಇರಲಿ ಜನರನ್ನು ಮರೆಯಬಾರದು ಅಷ್ಟೆ. ಮುಂಬರುವ ತುಮಕೂರು ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲು ಜಗ್ಗೇಶ್ ತಯಾರಿ ನಡೆಸಿದ್ದಾರೆ. ಜತೆಗೆ ಆವರ ಪತ್ನಿ ಪರಿಮಳಾ ಅವರನ್ನು ತುರುವೇಕೆರೆ ಉಪಚುನಾವಣೆ ಕಣಕ್ಕಿಳಿಯಲಿದ್ದಾರೆ. ಹಾಗೆಯೇ ಜಗ್ಗೇಶ್ ಮೈಸೂರು ಮಿನರಲ್ಸ್ ಸಂಸ್ಥೆಗೆ ಅಧ್ಯಕ್ಷರಾಗಲಿದ್ದಾರೆ ಎನ್ನುವ ಸುದ್ದಿಯೂ ಇದೆ.
ನಾ ಕಂಡ ರಾಜಕೀಯ:ನಟ ಶಾಸಕ ಜಗ್ಗೇಶ್ ಪುಸ್ತಕ
ಟಿಕೆಟ್ ಸಿಗದ ನವರಸನಾಯಕನ ಬಂಡಾಯ












Click it and Unblock the Notifications