ರಾಜೀವ್ ಗಾಂಧಿ ವಿ.ವಿ ನಗರದಲ್ಲೇ ಇರಲಿದೆ
ಬೆಂಗಳೂರು, ಜು. 8 : ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಸ್ಥಳಾಂತರ ಕುರಿತು ಸರ್ಕಾರದ ಮುಂದೆ ಯಾವ ಚಿಂತನೆಯಿಲ್ಲ. ನಗರದಲ್ಲಿಯೇ ಅದು ಮುಂದುವರೆಯಲಿದೆ ಎಂದು ಮುಖ್ಯಮಂತ್ರಿಯವರ ಕಾರ್ಯಾಲಯ ಸ್ಪಷ್ಟಪಡಿಸುವ ಮೂಲಕ ಇದುವರೆಗೂ ಎದ್ದಿದ್ದ ಸ್ಥಳಾಂತರ ವಿಷಯದ ಉಪಾಪೋಹಕ್ಕೆ ತೆರೆ ಎಳೆದಿದೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಅಧಿಕಾರ ಅವಧಿಯಲ್ಲಿ ಈ ವಿಶ್ವವಿದ್ಯಾಲಯವನ್ನು ಸ್ವಕ್ಷೇತ್ರ ರಾಮನಗರಕ್ಕೆ ಸ್ಥಳಾಂತರಿಸಲು ಆದೇಶ ನೀಡಿದ್ದರು. ಈ ಕುರಿತು ಕೆಲ ಪ್ರಕ್ರಿಯೆಗಳು ನಡೆದಿದ್ದವು. ಆದರೆ ಇದೀಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಈ ವಿಶ್ವವಿದ್ಯಾಲಯವನ್ನು ದಾವಣಗೆರೆ ಇಲ್ಲವೇ ಬಳ್ಳಾರಿಗೆ ಸ್ಥಳಾಂತರ ಮಾಡುವ ಬಗ್ಗೆ ಸುದ್ದಿ ದಟ್ಟವಾಗಿತ್ತು. ಈ ಕ್ರಮವನ್ನು ಕುಮಾರಸ್ವಾಮಿ ಬಿಜೆಪಿ ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಕಳೆದ ಕೆಲ ದಿನಗಳಿಂದ ಈ ಕುರಿತು ತಿಕ್ಕಾಟ ಜೋರಾಗಿ ನಡೆದಿತ್ತು. ಈ ವಿವಾದ ವಿದ್ಯಾರ್ಥಿಗಳ ಮೇಲೆ ತೀವ್ರ ಪರಿಣಾಮ ಬೀರಿತ್ತು. ಹಾಗೆಯೇ ಅಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೂ ತಲೆನೋವಾಗಿತ್ತು. ವಿಶ್ವವಿದ್ಯಾಲಯ ಯಾವ ಸ್ಥಳದಲ್ಲಿ ಸ್ಫಾಪನೆಯಾಗಲಿದೆ ಎನ್ನುವ ಗೊಂದಲ ಆವರಲ್ಲಿ ಮನೆ ಮಾಡಿತ್ತು. ಶೈಕ್ಷಣಿಕ ಆರಂಭವಾಗುವ ಹೊತ್ತಿಗೆ ವಿವಾದ ಸೃಷ್ಟಿಯಾಗಿದ್ದು, ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುವುದನ್ನು ಗಮನಿಸಿರುವ ಸರ್ಕಾರ ನಗರದಲ್ಲಿ ವಿಶ್ವವಿದ್ಯಾಲಯವನ್ನು ಮುಂದುವರೆಸಲು ತೀರ್ಮಾನಿಸಿದೆ ಎಂದು ಸಿಎಂ ಕಚೇರಿ ತಿಳಿಸಿದೆ.
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಗ್ರಹಗತಿಯೇ ಉತ್ತಮವಾಗಿದ್ದಂತಿಲ್ಲ. ಆರಂಭವಾದಾಗಿನಿಂದಲೂ ಈ ವಿಶ್ವವಿದ್ಯಾಲಯ ಒಂದಲ್ಲ ಒಂದು ವಿವಾದಕ್ಕೆ ಸಿಲುಕುತ್ತಲೇ ಬಂದಿದೆ. ಇದೀಗ ಸ್ಥಳಾಂತರ ವಿಷಯಕ್ಕೆ ಸಂಬಂಧಿಸಿದಂತೆ ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ. ಈ ಮೂಲಕ ತಾತ್ಕಾಲಿಕವಾಗಿ ನಗರದಲ್ಲಿ ಮುಂದುವರೆಯಲಿದೆ ಎಂದು ಸರ್ಕಾರ ಹೇಳಿದೆ. ಆದರೆ ಮುಂದೆ ಹೇಗೆ ಎನ್ನುವುದು ಕಾದು ನೋಡಬೇಕಿದೆ. ಒಂದು ಸತ್ಯದ ಸಂಗತಿ ಎಂದರೆ ಈ ವಿಶ್ವವಿದ್ಯಾಲಯ ಆರಂಭವಾಗಿ ಸುಮಾರು 15 ವರ್ಷ ಕಳೆದಿವೆ. ಇಲ್ಲಿಯವರೆಗೂ ಇದು ಮೂಲಭೂತ ಸೌಕರ್ಯಗಳಿಂದ ಬಳಲುತ್ತಿದೆ ಎನ್ನುವ ಕೂಗು ಕೇಳಿ ಬರುತ್ತಿದೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
