ಹಾವೇರಿ ರೈತ ಪುಟ್ಟಪ್ಪ ಹೊನ್ನತ್ತಿ ದುರ್ಮರಣ
ಬೆಂಗಳೂರು,ಜು. 8 : ರಸಗೊಬ್ಬರ ಸಮಸ್ಯೆ ಉಲ್ಭಣಿಸಿ ಕಳೆದ ತಿಂಗಳು ಹಾವೇರಿ ನಗರದಲ್ಲಿ ನಡೆದ ಪೊಲೀಸ್ ಗೋಲಿಬಾರ್ ನಲ್ಲಿ ತೀವ್ರವಾಗಿ ಗಾಯಗೊಂಡು ನಗರದ ಸಂಜಯ ಗಾಂಧಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೈತ ಪುಟ್ಟಪ್ಪ ಹೊನ್ನತ್ತಿ ಉಸಿರಾಟ ತೊಂದರೆಯಿಂದ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾನೆ.
ಕಳೆದ ತಿಂಗಳು ರಸಗೊಬ್ಬರ ಸಮಸ್ಯೆಯಿಂದ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು. ಈ ಸಂದರ್ಭದಲ್ಲಿ ಹಾವೇರಿಯಲ್ಲಿ ಪ್ರತಿಭಟನೆ ತೀವ್ರಗೊಂಡು ಪೊಲೀಸ್ ಗೋಲಿಬಾರ್ ಆಗಿತ್ತು. ಸಿದ್ಧಲಿಂಗಪ್ಪ ಎನ್ನುವ ವ್ಯಕ್ತಿ ಮೃತಪಟ್ಟಿದ್ದ. ಪುಟ್ಟಪ್ಪ ಹೊನ್ನತ್ತಿ ಗಂಭೀರ ಗಾಯಗೊಂಡಿದ್ದರಿಂದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗ ದಾಖಲಿಸಲಾಗಿತ್ತು. ವೈದ್ಯರ ಸಲಹೆ ಮೇರೆಗೆ ಉನ್ನತ ಚಿಕಿತ್ಸೆಗಾಗಿ ನಗರದ ಸಂಜಯ ಗಾಂಧಿ ಆಸ್ಪತ್ರೆ ದಾಖಲಿಸಲಾಗಿತ್ತು. ಸುಮಾರು ದಿನಗಳಿಂದ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದ ಪುಟ್ಟಪ್ಪ, ತೀವ್ರ ಉಸಿರಾಟ ತೊಂದರೆಯಿಂದ ಮಂಗಳವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾನೆ. ಈ ವಿಷಯವನ್ನು ಪುಟ್ಟಪ್ಪನಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ದೃಡಪಡಿಸಿದ್ದಾರೆ.
ಪುಟ್ಟಪ್ಪ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಆತನ ಮನೆಯಲ್ಲಿ ಶೋಕದ ವಾತಾವರಣ ಕಂಡುಬಂದಿದೆ. ಮನೆಯ ಯಜಮಾನನನ್ನು ಕಳೆದುಕೊಂಡ ಕುಟುಂಬ ಸದಸ್ಯರ ರೋಧನ ಹೇಳತೀರದಾಗಿದೆ. ಪುಟ್ಟಪ್ಪ ಹೊನ್ನತ್ತಿ ಬಡ ಕೂಲಿ ಕಾರ್ಮಿಕ. ಆತನಿಗಿರುವುದು ಕೇವಲ 30 ಗುಂಟೆ ಜಮೀನು ಮಾತ್ರ. ಪತ್ನಿ, ಮೂವರು ಮಕ್ಕಳು ಇದ್ದಾರೆ. ಆತನ ಕುಟುಂಬಕ್ಕೆ ಸರ್ಕಾರ ಸಹಾಯ ಮಾಡಬೇಕು. ಆತನ ಹೆಂಡತಿಗೆ ಸರ್ಕಾರಿ ನೌಕರಿ ನೀಡಬೇಕು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಇದೇ ಗೋಲಿಬಾರ್ ನಲ್ಲಿ ಮೃತಪಟ್ಟ ಸಿದ್ಧಲಿಂಗಪ್ಪನ ಕುಟುಂಬಕ್ಕೆ ಸಹಾಯ ಮಾಡಿದೆ. ಜತೆಗೆ ಆತನ ಪತ್ನಿಗೆ ಸರ್ಕಾರಿ ನೌಕರಿಯನ್ನೂ ನೀಡಿದೆ. ಅಂತಹ ಭಾಗ್ಯ ಪುಟ್ಟಪ್ಪನ ಕುಟುಂಬಕ್ಕೂ ಸಿಗಬೇಕು. ಅದು ನ್ಯಾಯ ಅಲ್ಲವೇ.
(ದಟ್ಸ್ ಕನ್ನಡ ವಾರ್ತೆ)
ಹಾವೇರಿ ಘಟನೆ ಪೂರ್ವ ನಿಯೋಜಿತ: ಬಿಎಸ್‌ವೈ


Click it and Unblock the Notifications
