ಯುಪಿಎ ಬೆಂಬಲಕ್ಕೆ ದೇವೇಗೌಡರ ಷರತ್ತು
ಬೆಂಗಳೂರು, ಜು. 8 : ಜಾತ್ಯಾತೀತ ಪಕ್ಷಗಳು ಒಗ್ಗೂಡಿ ಉಪಚುನಾವಣೆ ಎದುರಿಸಲು ಸಿದ್ಧವಾದರೆ ಮಾತ್ರ ಕೇಂದ್ರದ ಯುಪಿಎ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಷರತ್ತು ಹಾಕಿದ್ದಾರೆ. ಈ ಮೂಲಕ ಶತಾಯ ಗತಾಯ ಪಕ್ಷ ತೊರೆದಿರುವ ಪಕ್ಷಾಂತರಿ ಶಾಸಕರನ್ನು ಸೋಲಿಸುವ ಪಣ ತೊಟ್ಟಿದ್ದಾರೆನ್ನಲಾಗಿದೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮುಂಬರುವ ಉಪಚುನಾವಣೆಯಲ್ಲಿ ಜಾತ್ಯತೀತ ನಿಲುವನ್ನು ಹೊಂದಿರುವ ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಲ್ಲಿ ಯುಪಿಎ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಜೆಡಿಎಸ್ ಮೂರು ಸಂಸದರನ್ನು ಹೊಂದಿದೆ. ಎಡಪಕ್ಷಗಳು ಇಂದು ಬೆಂಬಲವನ್ನು ಹಿಂತೆಗೆದುಕೊಂಡಿದ್ದರಿಂದ ಈ ಸಮಸ್ಯೆ ಸೃಷ್ಟಿಯಾಗಿದ್ದು, ಇದರ ಬೆನ್ನಲ್ಲೇ ಸಮಾಜವಾದಿ ಪಕ್ಷ ಬೆಂಬಲವನ್ನು ಘೋಷಿಸಿದೆ. ಆದರೆ ಆ ಪಕ್ಷದಲ್ಲಿರುವುದು ಕೇವಲ 39 ಸಂಸದರು ಮಾತ್ರ. ಅವುಗಳನ್ನು ಸೇರಿಸಿದರೆ ಯುಪಿಎಗೆ ಇನ್ನು 6 ರಿಂದ 7 ಸಂಸದರ ಅವಶ್ಯಕತೆ ಇದೆ. ಈ ಹಿನ್ನಲೆಯಲ್ಲಿ ನಿರ್ಣಾಯಕ ಸ್ಥಾನದಲ್ಲಿರುವ ಜೆಡಿಎಸ್, ಕಾಂಗ್ರೆಸ್ ಪಕ್ಷಕ್ಕೆ ಈ ಷರತ್ತು ವಿಧಿಸಿದೆ. ಆದರೆ ಆರ್ಎಲ್ ಡಿ ಮೂರು, ಪಕ್ಷೇತರರು ಐದು ಮತ್ತು ಇತರರು ಐದು ಮಂದಿ ಸಂಸದರು ಇದ್ದಾರೆ.
ಪರಮಾಣು ಒಪ್ಪಂದ ಸಂಬಂಧಿಸಿದಂತೆ ಯುಪಿಎಗೆ ಎಡಪಕ್ಷಗಳು ನೀಡಿರುವ ಬೆಂಬಲ ಹಿಂತೆಗೆದುಕೊಂಡಲ್ಲಿ ಬೆಂಬಲ ನೀಡುವುದಾಗಿ ಹೇಳಿದ್ದ ಶಿವಸೇನೆ ಮುಖಂಡ ಬಾಳಾಠಾಕ್ರೆ, ಇದೀಗ ರಾಗ ಬದಲಿಸಿದ್ದು ಯುಪಿಎಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಯುಪಿಎ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಪಕ್ಷಾಂತರಿಗಳನ್ನು ಸೋಲಿಸಲು ಪಣ
ಜೆಡಿಎಸ್ ತೊರೆದಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳೆ, ದೇವದುರ್ಗದ ಶಾಸಕ ಶಿವನಗೌಡ ನಾಯಕ್, ದೊಡ್ಡಬಳ್ಳಾಪುರ ಶಾಸಕ ಜೆ.ನರಸಿಂಹಸ್ವಾಮಿ ಹಾಗೂ ಕಾರವಾರ ಶಾಸಕ ಆನಂದ ಅಸ್ನೋಟಿಕರ ಅವರನ್ನು ಹೇಗಾದರೂ ಮಾಡಿ ಸೋಲಿಸಬೇಕು ಎನ್ನುವುದು ಗೌಡರ ಯೋಜನೆ. ಈ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದು ಅವರ ತಂತ್ರ. ಈ ಕುರಿತು ಈಗಾಗಲೇ ಕಾರ್ಯತಂತ್ರ ಹೆಣೆಯಲು ಆರಂಭಿಸಿರುವ ಅವರು, ಕಾಂಗ್ರೆಸೆ ಜತೆ ಹೊಂದಾಣಿಕೆ ಮಾಡಿಕೊಂಡಲ್ಲಿ ಪೈಪೋಟಿ ನೀಡುವುದರ ಜತೆಗೆ ಗೆಲುವು ಸಾಧಿಸುವ ಸಾಧ್ಯತೆಗಳಿವೆ ಎನ್ನುವುದು ಅವರ ಲೆಕ್ಕಾಚಾರವಾಗಿದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ನಿಂದ ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಸಿದ್ಧು ಬಂಡಾಯ
ದೇವೇಗೌಡರು ನೀಡಿರುವ ಹೊಂದಾಣಿಕೆಯ ಆಹ್ವಾನವನ್ನು ಪುರಸ್ಕರಿಸಬೇಕೋ, ತಿರಸ್ಕರಿಸಿಬೇಕೋ ಎನ್ನುವ ಸಂದಿಗ್ಧ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿಯಾಗಿದೆ. ಹೊಂದಾಣಿಕೆಯಾದಲ್ಲಿ ಆದರ ಸಾಧಕ ಬಾಧಕಗಳನ್ನು ಅವಲೋಕಿಸತೊಡಗಿದೆ. ಒಂದು ವೇಳೆ ಮುಂಬರುವ ಉಪಚುನಾವಣೆಗೆ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಲ್ಲಿ ಮಾಜಿ ಉಪಮುಖ್ಯಮಂತ್ರಿ ಸಿದ್ಧರಾಮಯ್ಯ ಸಿಡಿದೇಳುವುದರಲ್ಲಿ ಎರಡು ಮಾತಿಲ್ಲ. ಮೊನ್ನೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆಗೆ ಹೊಂದಾಣಿಕೆ ಮಾಡಿಕೊಂಡು ಅನಿಲ್ ಲಾಡ್ ಅವರನ್ನು ಆಯ್ಕೆ ಮಾಡಿರುವುದು ಸಿದ್ಧರಾಮಯ್ಯಗೆ ಕೋಪ ತರಿಸಿದೆ. ಈ ಹಿನ್ನಲೆಯಲ್ಲಿ ಮತ್ತೆ ಈ ಚುನಾವಣೆಯಲ್ಲಿ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡರೆ ಸಿದ್ಧರಾಮಯ್ಯ ಕಾಂಗ್ರೆಸ್ ಪಾಳೆಯದಿಂದ ಹೊರಬರುವುದು ಖಚಿತ. ಈಗಾಗಲೇ ಮಾನಸಿಕವಾಗಿ ಕಾಂಗ್ರೆಸ್ ಪಕ್ಷದಿಂದ ಹೊರಗಿರುವ ಸಿದ್ಧು, ಈ ಬೆಳವಣಿಗೆ ಏನಾದರೂ ನಡೆದಲ್ಲಿ ಕಾಂಗ್ರೆಸ್ ತೊರೆಯುವ ಸಾಧ್ಯತೆ ಹೆಚ್ಚು. ಮುಂದೆ ಸಿದ್ಧು ಬಿಜೆಪಿ ಸೇರಬಹುದು ಇಲ್ಲವೇ ಪ್ರಕಾಶ್, ಸಿಂಧ್ಯಾ, ಸೋಮಶೇಖರ್ ಜನತಾ ಪರಿವಾರ ಮಂದಿ ಸೇರಿಕೊಂಡು ಎಬಿಪಿಜೆಡಿ ಪಕ್ಷವನ್ನು ಕಟ್ಟಬಹುದಾಗಿದೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
