ಗುಲ್ಬರ್ಗದಲ್ಲಿ ನ್ಯಾಯ ದೇಗುಲ ಬಾಗಿಲು ತೆರೆಯಿತು
ಗುಲ್ಬರ್ಗ, ಜು. 5 : ಹೈದರಾಬಾದ್ ಕರ್ನಾಟಕ ಪ್ರದೇಶದ ಜನರ ಮಹತ್ವಕಾಂಕ್ಷೆಯ ಸಂಚಾರಿ ಹೈಕೋರ್ಟ್ ಪೀಠವನ್ನು ಸುಪ್ರಿಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಡಾ.ಕೆ.ಜಿ.ಬಾಲಕೃಷ್ಣನ್ ಶನಿವಾರ ವಿದ್ಯುಕ್ತವಾಗಿ ಉದ್ಘಾಟನೆ ಮಾಡಿದರು. ಜು. 7 ರಿಂದ ಅಧಿಕೃತವಾಗಿ ಸಂಚಾರಿ ಹೈಕೋರ್ಟ್ ಪೀಠ ಕಾರ್ಯಾರಂಭ ಮಾಡಲಿದೆ. ಬಹುದಿನದ ಕನಸು ನನಸಾದ ಈ ಕ್ಷಣದಲ್ಲಿ ಜನರ ಸಂಭ್ರಮ ಸಡಗರ ಮುಗಿಲು ಮುಟ್ಟಿತ್ತು.
ಸುಮಾರು ಐದು ದಶಕಗಳ ಅವಿರತ ಸತ್ಯಾಗ್ರಹ, ಹೋರಾಟದ ಮೂಲಕ ನ್ಯಾಯ ದೇಗುಲದ ಬಾಗಿಲು ಗುಲ್ಬರ್ಗದಲ್ಲಿ ಇಂದು ತೆರೆಯಿತು. ಹೈಕೋರ್ಟ್ ಸಂಚಾರಿ ಪೀಠದ ಸ್ಥಾಪನೆ ಕೇವಲ ಕಟ್ಟಡ, ಕಲ್ಲು, ಇಟ್ಟಿಗೆ, ಸಿಮೆಂಟ್ ಅಲ್ಲ. ಅದು ಈ ಭಾಗದ ಜನತೆಯ ಅಭಿಮಾನ ಮತ್ತು ಸಾಧನೆಯ ಸಂಕೇತ. ಇದರಿಂದ ಗುಲ್ಬರ್ಗಾ, ರಾಯಚೂರು, ಬೀದರ್ ಮತ್ತು ಬಿಜಾಪೂರ ಜಿಲ್ಲೆಗಳ ಜನರು ಇದರ ಅನುಕೂಲ ಪಡೆಯಲಿದ್ದಾರೆ. ನ್ಯಾಯವಾದಿಗಳು, ಚಿಂತಕರು, ಸಾಹಿತಿಗಳು, ಬುದ್ಧಿಜೀವಿಗಳ ಬಹುದಿನದ ಕನಸು ನನಸಾದ ಐತಿಹಾಸಿಕ ಮಹತ್ವದ ದಿನ.
ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಅಡಳಿತಾವಧಿಯಲ್ಲಿ ಸಂಚಾರಿ ಹೈಕೋರ್ಟ್ ಪೀಠಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದರು. ಹುಬ್ಬಳ್ಳಿ ಮತ್ತು ಧಾರವಾಡ ಹೈಕೋರ್ಟ್ ಕಟ್ಟಡ ನಿವೇಶನಗಳ ನಿರ್ಮಾಣ ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ಬಜೆಟ್ ನಲ್ಲಿ 215 ಕೋಟಿ ರುಪಾಯಿಗಳನ್ನು ನೀಡಿದ್ದರು. ನ್ಯಾಯಮೂರ್ತಿಗಳು ಹಾಗೂ ಸಿಬ್ಬಂದಿಗಳ ವಸತಿ ಗೃಹಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಶೀಘ್ರದಲ್ಲಿ ಸಂಚಾರಿ ಹೈಕೋರ್ಟ್ ಪೀಠದ ಆಡಳಿತ ಮಂಡಳಿಗೆ ಇವುಗಳನ್ನು ಒದಗಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಮುಖ್ಯವಾಗಿ ಹೈಕೋರ್ಟ್ ಕಾರ್ಯರಂಭಕ್ಕೆ ಉತ್ತಮ ವ್ಯವಸ್ಥೆಯ ಕೊಠಡಿಗಳು ಬೇಕಾಗಿದೆ. ಆವುಗಳ ಕಾಮಗಾರಿ ಶೀಘ್ರದಲ್ಲಿ ಮುಗಿಯಲಿದೆ ಎಂದು ಸರ್ಕಾರ ಭರವಸೆ ನೀಡಿತು.
ಈ ಸಂದರ್ಭದಲ್ಲಿ ಸುಪ್ರಿಂಕೋರ್ಟ್ ನ್ಯಾಯಮೂರ್ತಿ ಆರ್. ರವೀಂದ್ರನ್, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಎನ್.ಧರ್ಮಸಿಂಗ್ ಮತ್ತಿತರರು ಉಪಸ್ಥಿತರಿದ್ದರು.
ಕರಪತ್ರ ಎಸೆತ ಪ್ರತಿಭಟನೆ
ಹೈಕೋರ್ಟ್ ಸಂಚಾರಿ ಪೀಠ ಉದ್ಘಾಟನೆ ವೇಳೆಯಲ್ಲಿ ಬ್ಯಾಕ್ ಲಾಗ್ ಎಂಜನಿಯರ್ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ನಿರುದ್ಯೋಗಿ ಎಂಜನಿಯರ್ ಗಳು ಪ್ರತಿಭಟನೆ ನಡೆಸಿದರು. ಈ ವೇಳೆಯಲ್ಲಿ ಮುಖ್ಯಮಂತ್ರಿಗಳು ಸೂಕ್ತವಾಗಿ ಸ್ಪಂದಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಾ.ಕೆ.ಜಿ.ಬಾಲಕೃಷ್ಣನ್ ಅವರ ಮೇಲೆ ಕರಪತ್ರ ಎಸೆದ ಘಟನೆ ನಡೆದಿದೆ. ಕರಪತ್ರ ಎಸೆದ ಪ್ರತಿಭಟನಾಕಾರ ನಿರುದ್ಯೋಗಿ ಎಂಜನಿಯರ್ ಗಳನ್ನು ಪೊಲೀಸರು ವಶಕ್ಕೆ ತಗೆದುಕೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
