ಐಪಿಎಲ್ ಮುಂದೆ ಅಂತಾರಾಷ್ಟ್ರೀಯ ಕ್ರಿಕೆಟ್ ಯಾವ ಲೆಕ್ಕ?
ಸಿಡ್ನಿ, ಜೂ. 28 : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತೋರಿಸುತ್ತಿರುವ ಹಣದ ಥೈಲಿಗೆ ಮರುಳಾಗಿರುವ ಶೇ. 50ರಷ್ಟು ಖ್ಯಾತ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ತಿಲಾಂಜಲಿ ಇಡಲು ತುದಿಗಾಲ ಮೇಲೆ ನಿಂತಿದ್ದಾರೆ.
ಐಪಿಎಲ್‌ನಲ್ಲಿ ಹರಿಯುತ್ತಿರುವ ಹಣದ ಮೋಡಿಯೇ ಅಂತಹುದು. ಅನೇಕ ಅಂತಾರಾಷ್ಟ್ರೀಯ ಆಟಗಾರರಿಗೆ ಐಪಿಎಲ್ ಚಿನ್ನದ ಮೊಟ್ಟೆಯಿಡುವ ಕೋಳಿಯಂತಾಗಿದೆ. ಹಣದ ಆಮಿಷದ ಮುಂದೆ ರಾಷ್ಟ್ರದ ಪರ ಆಡುವ ಪ್ರತಿಷ್ಠೆ ಕೂಡ ಮಣ್ಣುಪಾಲಾಗುತ್ತಿದೆ.
ಫೆಡರೇಷನ್ ಇಂಟರ್‌ನ್ಯಾಷನಲ್ ಕ್ರಿಕೆಟರ್ಸ್ ಅಸೋಸಿಯೇಷನ್ (ಫಿಕಾ) ನಡೆಸಿದ ಸಮೀಕ್ಷೆ ಈ ಆಘಾತಕಾರಿ ಸಂಗತಿಯನ್ನು ಬಹಿರಂಗ ಮಾಡಿದೆ. ಪ್ರೊಫೆಷನಲ್ ಕ್ರಿಕೆಟರ್ಸ್ ಅಸೋಸಿಯೇಷನ್ ನಡೆಸಿದ ಸಮೀಕ್ಷೆ ಕೂಡ ಇದೇ ಫಲಿತಾಂಶವನ್ನು ನೀಡಿದೆ. ಇಂಗ್ಲೆಂಡ್‌ನ ಅರ್ಧದಷ್ಟು ಆಟಗಾರರು ರಾಷ್ಟ್ರೀಯ ಕ್ಯಾಪನ್ನು ಐಪಿಎಲ್‌ಗಾಗಿ ತ್ಯಜಿಸಲು ಈಗಾಗಲೆ ಸಿದ್ಧರಾಗಿದ್ದಾರೆ.
ಫಿಕಾ ಸಂದರ್ಶಿಸಿದ 105 ಅಂತಾರಾಷ್ಟ್ರೀಯ ಆಟಗಾರರಲ್ಲಿ 64 ಜನ ಐಪಿಎಲ್ ಪರ ವಾಲಿದ್ದಾರೆ. ಪ್ರಸ್ತುತ ಆಯಾ ರಾಷ್ಟ್ರದ ಪರ ಆಡುತ್ತಿರುವ ಆಟಗಾರರಷ್ಟೇ ಏಕೆ ಕ್ರಿಕೆಟ್ ಆಡಲು ಉತ್ಸಾಹ ಕಳೆದುಕೊಂಡಿದ್ದ, ತಂಡದಿಂದ ಕಿತ್ತುಹಾಕಲಾಗಿದ್ದ ಆಟಗಾರರು ಕೂಡ ಐಪಿಎಲ್ ಪರ ಆಡಲು ಪ್ಯಾಡ್ ಕಟ್ಟಲು ಸಿದ್ಧರಾಗಿದ್ದಾರೆ. ಇತ್ತೀಚೆಗೆ ನಡೆದ ಡಿಎಲ್ಎಫ್ ಟ್ವೆಂಟಿ20 ಟೂರ್ನಿಯೇ ಇದಕ್ಕೆ ಸಾಕ್ಷಿಯಾಗಿದೆ.
ಟ್ವೆಂಟಿ20 ಪಂದ್ಯಗಳು ಟೆಸ್ಟ್ ಕ್ರಿಕೆಟ್‌ಗಿಂತ ಏಕದಿನದ ಕ್ರಿಕೆಟ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಅಭಿಪ್ರಾಯವನ್ನು ಅನೇಕ ಆಟಗಾರರು ವ್ಯಕ್ತಪಡಿಸಿದ್ದಾರೆ. ಇದೇ ಸಮಯದಲ್ಲಿ, ಟ್ವೆಂಟಿ20 ಮತ್ತು ಟೆಸ್ಟ್ ಕ್ರಿಕೆಟ್ ನಡುವೆ ಸಮತೂಕವನ್ನು ಕಾಯ್ದುಕೊಳ್ಳಬೇಕೆಂಬ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ, ಕ್ರಿಕೆಟ್ ಚೀಫ್‌ಗಳು ಕೈಕಟ್ಟಿ ಕುಳಿತುಕೊಳ್ಳಲು ಸಿದ್ಧರಿಲ್ಲ. ಸದ್ಯದಲ್ಲಿಯೇ ದುಬೈನಲ್ಲಿ ಭೇಟಿಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಭವಿಷ್ಯವನ್ನು ಭದ್ರಪಡಿಸುವ ಕುರಿತು ಚರ್ಚೆ ನಡೆಸಲಿದ್ದಾರೆ.
(ಏಜೆನ್ಸೀಸ್)


Click it and Unblock the Notifications
