ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಪ್ಯೂಟರ್ ಬಾಬಾ ಬಿಲ್ ಗೇಟ್ಸ್ ಗೆ ಬೈಬೈ

By Staff
|
Google Oneindia Kannada News

Farewell to Bill Gatesಬೆಂಗಳೂರು, ಜೂ. 27 : ವಿಶ್ವದ ಅತಿದೊಡ್ಡ ಸಾಫ್ಟ್‌ವೇರ್ ಕಂಪನಿ ಮೈಕ್ರೊಸಾಫ್ಟ್‌‍ನ ಅಧ್ಯಕ್ಷ ಸ್ಥಾನ ಇಂದು (ಜೂ.27)ತೆರವಾಯಿತು. ಅಧ್ಯಕ್ಷರಾಗಿ ಅವರು ನಿರ್ವಹಿಸುತ್ತಿದ್ದ ಕೆಲಸ ಕಾರ್ಯಗಳು ರೇ ಓಝೀ, ಕ್ರೆಗ್ ಮುಂಡೆ ಹಾಗೂ ಸ್ಟೀವ್ ಬಾಮರ್ ಅವರಿಗೆ ಹಂಚಿಕೆಯಾಗಲಿವೆ.

ಮೈಕ್ರೊಸಾಫ್ಟ್‌ನ ಮುಖ್ಯ ಸಾಫ್ಟ್‌ವೇರ್ ಆರ್ಕಿಟೆಕ್ಟ್ ಆಗಿ ರೇ ಓಝೀ, ಸಂಶೋಧನೆ ಮತ್ತು ಯೋಜನೆಯ ಜವಾಬ್ದಾರಿ ಕ್ರೆಗ್ ಮುಂಡೆ ಹಾಗೂ ಬಿಲ್ ಗೇಟ್ಸ್ ‌ನ ಹಾರ್ವಡ್ ವಿಶ್ವವಿದ್ಯಾಲಯದ ಸಹಪಾಠಿ ಸ್ಟೀವ್ ಬಾಮರ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಇದೇ ವೇಳೆ, ತಮ್ಮ 52ನೇ ವರ್ಷಕ್ಕೆ ನಿವೃತ್ತಿ ಘೋಷಿಸಿಕೊಂಡ ಬಿಲ್ ಗೇಟ್ಸ್ ಸಮಾಜ ಕಲ್ಯಾಣ ಚಟುವಟಿಕೆಗಳತ್ತ ಮುಖಮಾಡಿನಿಂತರು.

ತಮ್ಮ ಅಧ್ಯಕ್ಷ ಸ್ಥಾನ ಬಿಡುವ ದಿನಗಳು ಹತ್ತಿರವಾಗುತ್ತಿದ್ದಂತೆ ಬಿಲ್ ಗೆಟ್ಸ್ ತಮ್ಮ ಗಮನವನ್ನು ಸಮಾಜ ಸೇವೆಯ ಕಡೆ ಹರಿಸಿದ್ದರು. ತಮ್ಮ ಪತ್ನಿ ಮೆಲಿಂಡಾ ಗೇಟ್ಸ್ ರೊಂದಿಗೆ ಹೆಚ್ಚುಹೆಚ್ಚು ಸಮಾಜಮುಖಿಯಾಗತೊಡಗಿದರು. ತಮ್ಮ ಸಂಪತ್ತಿನ ಬಹುಪಾಲು (ಸುಮಾರು 2,900 ಕೋಟಿ ಡಾಲರ್) ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್ ಮೂಲಕ ಕೆರೆಯ ನೀರನ್ನು ಕೆರೆಗೆ ಚೆಲ್ಲಲು ನಿರ್ಧರಿಸಿ ಸಮಾಜಕ್ಕೆ ಶಾಪವಾಗಿರುವ ಏಡ್ಸ್, ಪೋಲಿಯೊ, ಮಲೇರಿಯಾ ಕಾಯಿಲೆಗಳನ್ನು ತೊಡೆದು ಹಾಕಲು ಶ್ರಮಿಸುತ್ತಿದ್ದಾರೆ.

ತಮ್ಮ ಅಪಾರ ಪರಿಶ್ರಮದ ಮೂಲಕ ಗೇಟ್ಸ್ ಬರೀ ಕಂಪನಿಯನ್ನು ಮಾತ್ರ ಕಟ್ಟಲಿಲ್ಲ. ಬದಲಾಗಿ ಒಂದು ಬೃಹತ್ ಸಾಫ್ಟ್‌ವೇರ್ ಉದ್ಯಮವನ್ನೇ ಬೆಳಸಿದರು. ನಾಲ್ಕು ಆಶ್ರಮಗಳಾದ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಹಾಗೂ ಸನ್ಯಾಸಗಳನ್ನು ತಲಾ 25 ವರ್ಷ ಕಳೆಯಬೇಕು ಎಂದು ಹಿಂದೂ ಸಂಸ್ಕೃತಿ ಹೇಳುತ್ತದೆ. ವಾನಪ್ರಸ್ಥ ಅವಧಿಯಲ್ಲಿ ತಾನು ಮತ್ತು ತನ್ನ ಕುಟುಂಬಕ್ಕಾಗಿ ದುಡಿಯದೆ ಸಮಾಜ ಸೇವೆಗೆ ತಮ್ಮನ್ನ್ನು ಅರ್ಪಿಸಿಕೊಳ್ಳಬೇಕು ಎನ್ನುತ್ತದೆ. ಗೇಟ್ಸ್ ಈಗ ತಮ್ಮನ್ನು ತಾವು ವಾನಪ್ರಸ್ಥಕ್ಕೆ ಒಡ್ಡಿಕೊಂಡಿದ್ದಾರೆ.

ರೇ ಓಝೀ ಯಾರು?
ಇಲಿನಾಯ್ಸ್ ವಿಶ್ವವಿದ್ಯಾಲಯದಲ್ಲಿ ಸ್ನಾತಕ ಪದವಿ ಪಡೆದಿರುವ ರೇ ಓಝೀ (50) ತಮ್ಮ ಐಟಿ ವೃತ್ತಿ ಜೀವನದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಮತ್ತೊಂದು ಸಾಫ್ಟ್‌ವೇರ್ ದಿಗ್ಗಜ ಕಂಪನಿ ಐಬಿಎಂನ ಲೋಟಸ್ ನೋಟ್ಸ್‌ ತಂತ್ರಾಂಶ ಸೃಷ್ಟಿಕರ್ತರಿವರು. ಕಂಪ್ಯೂಟರ್‌ ಜಾಲ ಹೇಗೆ ಕೆಲಸ ನಿರ್ವಹಿಸುತ್ತವೆ ಎಂಬುದನ್ನು ಅನ್ವೇಷಿಸಿದ ಹೆಗ್ಗಳಿಕೆ ಓಝೀ ಅವರಿಗೆ ಸಲ್ಲುತ್ತದೆ. 1997ರಲ್ಲಿ ಗ್ರೂವ್ ನೆಟ್‌ವರ್ಕ್ಸ್ ಎಂಬ ಕಂಪನಿಯನ್ನು ಹುಟ್ಟು ಹಾಕಿದ್ದರು. ಆ ಕಂಪನಿಯನ್ನು ಮೈಕ್ರೊಸಾಫ್ಟ್‌ ಖರೀದಿಸಿತು. ಮೈಕ್ರೋಸಾಫ್ಟ್‌ ಕಂಪನಿಯ ಕೀರ್ತಿ ಪತಾಕೆ ನಾಲ್ಕು ದಿಕ್ಕುಗಳಿಗೆ ಪಸರಿಸಲು ಓಝೀ ಶ್ರಮ ಸಹ ಸಾಕಷ್ಟಿದೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X